ಹೊಸ ದಿಗಂತ ವರದಿ, ಮಡಿಕೇರಿ:
ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಆವರಣದಲ್ಲಿ ಗಣರಾಜ್ಯೋತ್ಸವ ಮತ್ತು ಯೋಧ ವಂದನಾ ಕಾರ್ಯಕ್ರಮ ನಡೆಯಿತು.
ಮದೆನಾಡು ವಿ.ಎಸ್.ಎಸ್.ಎನ್ ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಮದೆನಾಡು, ಕಾಟಕೇರಿ, ಜೋಡುಪಾಲ, 2ನೇ ಮೊಣ್ಣಂಗೇರಿ ಗ್ರಾಮಗಳ ಸೇವೆಯಲ್ಲಿರುವ ಮತ್ತು ನಿವೃತ್ತರಾದ ಒಟ್ಟು 131 ಮಂದಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮದೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಅಗೋಳಿಕಜೆ ಮಾತನಾಡಿ, ಯೋಧರಿಂದಾಗಿ ದೇಶ ಸುಭದ್ರವಾಗಿದೆ. ಅವರ ಶ್ರಮದಿಂದ ನಾವೆಲ್ಲರೂ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಯೋಧರಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮೊದಲಿಗೆ ಅಗಲಿದ ಯೋಧರಿಗೆ ಮೌನಾಚರಣೆ ಮೂಲಕ ಗೌರವವನ್ನು ಸಲ್ಲಿಸಲಾಯಿತು. ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪನವರು ಯೋಧರ ಸೇವೆ, ತ್ಯಾಗದ ಕುರಿತಾಗಿ ಕವನವನ್ನು ವಾಚಿಸುವ ಮೂಲಕ ಸ್ವಾಗತಿಸಿದರು.
ಎಲ್ಲಕ್ಕಿಂತ ದೇಶ ಮುಖ್ಯ: ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕ್ಷೇತ್ರದ ಶಾಸಕ ಕೆ ಜಿ ಬೋಪಯ್ಯ, ಎಲ್ಲಕ್ಕಿಂತಲೂ ದೇಶ ಮುಖ್ಯ ಎಂಬ ಭಾವನೆ ಎಲ್ಲರಲ್ಲೂ ಇರಬೇಕು ಯೋಧರ ನಿಸ್ವಾರ್ಥ ಸೇವೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದ್ದು ಅದು ನೀಡಿರುವ ಹಕ್ಕನ್ನು ಪ್ರತಿಯೊಬ್ಬರೂ ಅರಿತು ಮುನ್ನಡೆಯಬೇಕೆಂದು ಹೇಳಿದರು.
ಭಾರತೀಯನನ್ನು ಹುಡುಕುವಂತಾಗಿದೆ: ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಸೇನಾಧಿಕಾರಿ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ ದೇಶದಲ್ಲಿ ಜಾತಿ,ಮತ,ಮೇಲು-ಕೀಳು ಎಂಬ ಭಾವನೆ ಹೆಚ್ಚಾಗಿರುವುದರಿಂದ ಭಾರತೀಯ ಎಲ್ಲಿದ್ದಾನೆ ಎಂದು ಹುಡುಕುವಂತಾಗಿದೆ ಎಂದು ವಿಷಾದಿಸಿದರು.
ಯಾವುದೇ ಭೇದಭಾವ ಇಲ್ಲದಿರುವ ಕ್ಷೇತ್ರವೆಂದರೆ ಅದು ಸೇನಾ ಕ್ಷೇತ್ರ ಮಾತ್ರ.ಆದುದರಿಂದ ಸೈನಿಕರಿಂದ ನಾವು ದೇಶ ಅಭಿಮಾನ ಪಾಠ ಕಲಿಯಬೇಕೆಂದರು ಸ್ವಾತಂತ್ರ್ಯ ಎಂದರೆ ಅದೊಂದು ಜವಾಬ್ದಾರಿ ಎಂಬುದನ್ನು ಅರಿತಾಗ ಮಾತ್ರ ದೇಶದ ಪ್ರಗತಿ ಹೊಂದಲು ಸಾಧ್ಯ ಎಂದರು. ಮಕ್ಕಳಿಗೆ ಪೋಷಕರು ಸಂಸ್ಕಾರದ ಪಾಠವನ್ನು ಕಲಿಸಬೇಕೆಂದು ಕಿವಿ ಮಾತು ಹೇಳಿದರು.
ಯೋಧ ವಂದನಾ ಭಾಷಣ ಮಾಡಿದ ಗ್ರಾಮಸ್ಥರು ಮತ್ತು ಮೈಸೂರಿನಲ್ಲಿ ಉಪನ್ಯಾಸಕರಾಗಿರುವ ಪಟ್ಟಡ ಶಿವಕುಮಾರ್ ಅವರು, ಯಾರು ಪರರಿಗಾಗಿ ಬದುಕುತ್ತಾರೋ ಅವರ ಬದುಕು ಸಾರ್ಥಕವೆನಿಸುತ್ತದೆ. ಈ ನಿಟ್ಟಿನಲ್ಲಿ ದೇಶಕ್ಕಾಗಿ ದುಡಿಯುವ ಯೋಧರು ಮತ್ತು ರೈತರದ್ದು ಸಾರ್ಥಕ ಜೀವನ ಎಂದು ಹೇಳಿದರು.ಯೋಧರ ಮತ್ತು ರೈತರ ಶ್ರಮ ಸದಾ ಸ್ಮರಣೀಯ ಎಂದು ಅವರು ನುಡಿದರು .
ವೇದಿಕೆಯಲ್ಲಿ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಹುಲಿಮನೆ.ಡಿ.ಹರೀಶ್ ಕುಮಾರ್, ಮದೆ ಗ್ರಾಮ ಪಂಚಾಯತಿ ಅಧ್ಯಕ್ಷ ನಡುಗಲ್ಲು ರಾಮಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿನಲ್ಲಿ ಮುಖ್ಯಪಾತ್ರ ವಹಿಸಿದ ಹಿರಿಯರು ಮತ್ತು ನಿವೃತ್ತ ಶಿಕ್ಷಕರಾದ ಶಿವರಾವ್ ಮಾಸ್ಟರ್ ಅವರನ್ನು ಗೌರವಿಸಲಾಯಿತು.
ಹುಲಿಮನೆ ಬಿಂದು ಪ್ರಾರ್ಥಿಸಿದರೆ, ವಿಠಲ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಾಗೀರಥಿ ವಂದಿಸಿದರು.