ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳು ಎನಿಸಿರೋ ಐಐಟಿ ಐಐಎಂ ಗಳಿಂದ ಕಲಿತು ಬಂದವರೆಂದರೆ ಅವರಿಗೇನೋ ವಿಶೇಷತೆಯಿದೆ ಎನ್ನುವ ಮಾನಸಿಕತೆ ಎಲ್ಲರಲ್ಲಿದೆ. ದೊಡ್ಡ ದೊಡ್ಡ ಕಂಪನಿಗಳೆನಿಸಿಕೊಂಡವರೂ ಸಹ ಐಐಟಿ ಐಐಎಂ ಗಳಿಂದ ಕಲಿತು ಬಂದವರಿಗೆ ಮಣೆ ಹಾಕುತ್ತಾರೆ. ಆದರೆ ಬೆಂಗಳೂರು ಮೂಲದ ಕಂಪನಿ ಜೇರೋದಾದ ಮನೋಭಾವ ಮಾತ್ರ ಭಿನ್ನ. ಇವರನ್ನು ನಾವು ಕೆಲಸಕ್ಕೆ ತಗೋಳ್ಳೋದೇ ಇಲ್ಲ ಅಂತ ಸ್ವತಃ ಅದರ ಸಂಸ್ಥಾಪಕರೇ ಹೇಳಿದ್ದಾರೆ. ವಾಸ್ತವದಲ್ಲಿ ಇಂದು ಷೇರುಮಾರುಕಟ್ಟೆ, ಟ್ರೇಡಿಂಗ್ ವಿಷಯದಲ್ಲಿ ಅಗ್ರಮಾನ್ಯವಾಗಿರೋ ಈ ಜೇರೋದ ಕಂಪನಿಯನ್ನು ಕಟ್ಟಿದವರೂ ಕೂಡ ಐಐಟಿ, ಐಐಎಂ ಗಳಲ್ಲಿ ಕಲಿತವರಲ್ಲ. ಆದರಿವರು ಕಟ್ಟಿದ ಕಂಪನಿ ಇಂದು ಬಹುದೊಡ್ಡದಾಗಿ ಬೆಳೆದಿದೆ.
ಈ ಕಂಪನಿ ಐಐಟಿ, ಐಐಎಂನಲ್ಲಿ ಕಲಿತವರನ್ನು ಕೆಲಸಕ್ಕೆ ಸೇರಿಸಿಕೊಳ್ಳದಿರೋದ್ಯಾಕೆ ಅಂತ ಸ್ವತಃ ಅದರ ಸಂಸ್ಥಾಪಕ ನಿತಿನ್ ಕಾಮತ್ ವಿವರಿಸಿದ್ದಾರೆ. ಅವರು ನೀಡೋ ಸ್ಪಷ್ಟ ಕಾರಣವೇನೆಂದರೆ ಐಐಟಿ, ಐಐಎಂಗಳಿಂದ ಬಂದವರೆಲ್ಲಅವರು ಕಂಪನಿಯ ಬೆಳವಣಿಗೆಯ ಬಗ್ಗೆ ಯೋಚಿಸುವ ಬದಲು ತಮ್ಮ ವೃತ್ತಿಜೀವನವನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚು ಗಮನ ಹರಿಸುತ್ತಾರೆ. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ವೇಗವಾಗಿ ಜಿಗಿಯಲು ಬಯಸುತ್ತಾರೆ. ಹಾಗಾಗಿ ಇವರನ್ನು ನಾವು ಇದುವರೆಗೂ ಸೇರಿಸಿಕೊಂಡಿಲ್ಲ ಅಂತ ವಿವರಿಸಿದ್ದಾರೆ.
ಅವರದೇ ಮಾತುಗಳಲ್ಲಿ ಹೇಳಬೇಕೆಂದರೆ “ಐಐಟಿ, ಐಐಎಂಗಳಲ್ಲಿ ಕಲಿತವರ ಮಾನಸಿಕತೆ ಹೇಗಿರುತ್ತೆ ಎಂದರೆ, ಅತ್ಯಂತ ವೇಗವಾಗಿ ಬೆಳೆಯೋದು ಹೇಗೆ ಎಂಬುದರ ಸುತ್ತಲೇ ಸುತ್ತುತ್ತದೆ. ಅವರು ಕಲಿತ ಪರಿಸರವೇ ಹಾಗಿರುತ್ತದೆ. ಯಾರೇ ಆಗಲಿ ಎಷ್ಟು ಬೇಗ ಬೆಳೆಯುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಹಾಗಾಗಿ ಇಂಥವರನ್ನು ಸಂಸ್ಥೆಯೊಳಗೆ ಹೊಂದಿಸುವುದು ನಮಗೆ ತುಂಬಾ ಕಠಿಣವಾದ ಕೆಲಸ. ನಮ್ಮ ಕಂಪನಿಯ ಸಂಸ್ಕೃತಿಗೆ ಇದು ಹೊಂದಿಕೆಯಾಗುವುದಿಲ್ಲ”
ಹಾಗೆಂದ ಮಾತ್ರಕ್ಕೆ ಐಐಟಿ, ಐಐಎಂ ನಿಂದ ಬಂದವರನ್ನು ನೇಮಿಸಿಕೊಳ್ಳುವುದೇ ಇಲ್ಲ ಎಂಬುದೂ ಕಾಮತ್ ಅವರ ಅಭಿಪ್ರಾಯವಲ್ಲ. ಬದಲಾಗಿ ಅವರ ಮಾನದಂಡಕ್ಕೆ ಸರಿಹೊಂದಿದರೆ ಅವರನ್ನು ನೇಮಿಸಿಕೊಳ್ಳುವ ಆಲೋಚನೆಯಿಂದ ಹಿಂದೆಸರಿಯಲಾರೆ ಅಂತಲೂ ಕಾಮತ್ ಹೇಳಿದ್ದಾರೆ. “”ನೀವು ಪ್ರತಿದಿನ ಎದ್ದು, ವಿಭಿನ್ನವಾಗಿ ಏನನ್ನಾದರೂ ಮಾಡುತ್ತಿದ್ದರೆ ಮತ್ತು ವ್ಯವಹಾರಿಕವಾಗಿ ಉತ್ತಮವಾಗಲು ಬಯಸಿದರೆ.. ನೀವು ಅವಕಾಶವನ್ನು ಪಡೆದುಕೊಳ್ಳಲು ಸರಿಯಾಗಿದ್ದರೆ, ನಾವು ನಿಮ್ಮನ್ನು ನೇಮಿಸಿಕೊಳ್ಳುವ ಸಾಧ್ಯತೆಗಳಿವೆ” ಅಂತ ಪಾಡ್ ಕಾಸ್ಟ್ ಒಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಕಾಮತ್.