ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಗೋವಾವನ್ನು ಬೆಚ್ಚಿಬೀಳಿಸಿದ್ದ ಅರ್ಪೋರಾ ನೈಟ್‌ಕ್ಲಬ್ ಅಗ್ನಿ ದುರಂತ ಪ್ರಕರಣದಲ್ಲಿ ತನಿಖೆ ತೀವ್ರಗೊಂಡಿದ್ದು, ಹೊಣೆಗಾರಿಕೆ ವಿಚಾರವಾಗಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. 25 ಮಂದಿ ಸಜೀವ ದಹನಗೊಂಡ ಈ ಭೀಕರ ಅವಘಡಕ್ಕೆ ಸಂಬಂಧಿಸಿ ಕ್ಲಬ್‌ನ ಪ್ರಧಾನ ವ್ಯವಸ್ಥಾಪಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕ್ಲಬ್ ಮಾಲೀಕನ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅರ್ಪೋರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪರಿಶೀಲನೆ ವೇಳೆ, ಅಗ್ನಿ ಸುರಕ್ಷತಾ ನಿಯಮಗಳನ್ನು ಕ್ಲಬ್ ಸಂಪೂರ್ಣವಾಗಿ ಉಲ್ಲಂಘಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಗ್ನಿ ನಂದಕ ವ್ಯವಸ್ಥೆ, ತುರ್ತು ನಿರ್ಗಮನ ದಾರಿಗಳು ಮತ್ತು ಅನುಮತಿಗಳ ಕೊರತೆ ಸ್ಪಷ್ಟವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ದುರಂತದ ಗಂಭೀರತೆಯನ್ನು ಪರಿಗಣಿಸಿರುವ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಪ್ರಕರಣಕ್ಕೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ಆದೇಶಿಸಿದ್ದಾರೆ. ಕ್ಲಬ್‌ಗೆ ನೀಡಲಾದ ಪರವಾನಗಿಗಳು, ಅವುಗಳನ್ನು ನೀಡಿದ ಅಧಿಕಾರಿಗಳು ಹಾಗೂ ಸುರಕ್ಷತಾ ತಪಾಸಣೆಯ ವಿವರಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

