September 30, 2026
Wednesday, September 30, 2026
spot_img

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ: ಸಿಎಂ ಸಿದ್ದರಾಮಯ್ಯ ಏನು ಹೇಳಿದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೆಬ್ರವರಿ 9ರಿಂದ ನಮ್ಮ ಮೆಟ್ರೋ ಪ್ರಯಾಣ ದರ ಶೇಕಡಾ 5ರಷ್ಟು ಏರಿಕೆ ಆಗಲಿದೆ. BMRCL ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಕೂಡ ಮೆಟ್ರೋ ವಿರುದ್ಧ ಬಾಯ್ಕಾಟ್ ಕ್ಯಾಂಪೇನ್ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರ ಮತ್ತು ಬಿಜೆಪಿ ಮಧ್ಯೆ ರಾಜಕೀಯ ಜಟಾಪಟಿಗೂ ಶುರುವಾಗಿದೆ.

ಇದರ ಮಧ್ಯೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಕೇಂದ್ರದ ಜತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು, ರಾಜ್ಯ ಸರ್ಕಾರ ಮೆಟ್ರೋ ದರಗಳನ್ನು ನಿರ್ಧರಿಸುವುದಿಲ್ಲ. ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಚಿಸಿರುವ ಸ್ವತಂತ್ರ ದರ ನಿಗದಿ ಕಮಿಟಿ ನಿರ್ಧರಿಸುತ್ತದೆ. ಸೆಕ್ಷನ್ 37ರ ಅಡಿಯಲ್ಲಿ ಈ ಶಿಫಾರಸುಗಳನ್ನ ಮೆಟ್ರೋ ಆಡಳಿತ ಶಿಫಾರಸು ಒಪ್ಪಿ ಜಾರಿ ಮಾಡಬೇಕಿದೆ ರಾಜ್ಯ ಸರ್ಕಾರಕ್ಕೆ ಅಥವಾ ಬಿಎಂಆರ್​ಸಿಎಲ್​ಗೆ ಅಧಿಕಾರವಿಲ್ಲ. ಶಿಫಾರಸು ರದ್ದುಗೊಳಿಸುವ, ಉಲ್ಲಂಘಿಸುವ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ.

ಸಂಸತ್ತಿನಲ್ಲಿ ತಾವೇ ಈ ಶಿಫಾರಸುಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಮಾಡಿ ಸರ್ಕಾರದ ಮೇಲೆ ಬೆಲೆ ಏರಿಕೆ ನಿರ್ಧಾರದ ಆರೋಪ ಹೊರಿಸುವುದು ಅಪ್ರಾಮಾಣಿಕ ನಡೆ ಮಾತ್ರವಲ್ಲ, ಜನರನ್ನು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ. ದರ ಪರಿಷ್ಕರಣೆಯ ಹೊಣೆಯನ್ನು ನಮ್ಮ ಸರ್ಕಾರದ ತಲೆಗೆ ಕಟ್ಟುವುದು ದುಷ್ಟತನ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಲ್ಲರಿಗೂ ಲಭ್ಯವಾಗುವಂತೆ ಕೈಗೆಟುಕುವ ದರದಲ್ಲಿರಬೇಕು. ದೈನಂದಿನ ಬದುಕಿಗೆ ಬಲ ತುಂಬುವಂತಿರಬೇಕು. ಬೆಂಗಳೂರಿನ ಬೆಳವಣಿಗೆಯೂ ಪ್ರಯಾಣಿಕರಿಗೆ ಹೊರೆಯಾಗಬಾರದು. ನಾನು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಿದ್ದೇನೆ ಎಂದಿದ್ದಾರೆ.

Must Read