ಹೊಸದಿಗಂತ ಡಿಜಿಟಲ್ ಡೆಸ್ಕ್:
ಉನ್ನತ ಶಿಕ್ಷಣದ ಕೇಂದ್ರವೆಂದು ಗುರುತಿಸಿಕೊಂಡಿರುವ ತೇಜಪುರ ವಿಶ್ವವಿದ್ಯಾಲಯ ಇದೀಗ ತೀವ್ರ ಆಡಳಿತಾತ್ಮಕ ಬಿಕ್ಕಟ್ಟಿನೊಳಗೆ ಸಿಲುಕಿದೆ. ಉಪಕುಲಪತಿ ಶಂಭುನಾಥ್ ಸಿಂಗ್ ವಿರುದ್ಧದ ಭ್ರಷ್ಟಾಚಾರ ಮತ್ತು ಅಕ್ರಮ ಆರೋಪಗಳು ಕ್ಯಾಂಪಸ್ ವಾತಾವರಣವನ್ನು ಸಂಪೂರ್ಣವಾಗಿ ಉದ್ವಿಗ್ನಗೊಳಿಸಿದ್ದು, ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿ ಒಗ್ಗೂಡಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಗೊಂದಲದ ನಡುವೆ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಅಂತಿಮ ಪರೀಕ್ಷೆಗಳು ಕೂಡ ರದ್ದಾಗಿವೆ.
ಸೆಪ್ಟೆಂಬರ್ ಮಧ್ಯಭಾಗದಿಂದಲೂ ಉಪಕುಲಪತಿಗಳ ಆಡಳಿತ ಶೈಲಿ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ‘ತೇಜಪುರ ವಿಶ್ವವಿದ್ಯಾಲಯ ಯುನೈಟೆಡ್ ಫೋರಂ’ ಹೆಸರಿನಲ್ಲಿ ನಡೆದ 79 ದಿನಗಳ ಶಾಂತಿಯುತ ಪ್ರತಿಭಟನೆ ಗಮನ ಸೆಳೆದಿದೆ. ಆದರೆ, ವಜಾ ಅಥವಾ ದೃಢ ಕ್ರಮದ ಕುರಿತು ಕೇಂದ್ರದಿಂದ ಸ್ಪಷ್ಟ ಆದೇಶ ಬರದೇ ಇರುವುದರಿಂದ ಅಸಮಾಧಾನ ಮತ್ತಷ್ಟು ಗಟ್ಟಿಯಾಗಿದೆ.

