ಇಂದಿನಿಂದ ಸಂಸತ್‌ ಬಜೆಟ್ ಅಧಿವೇಶನ ಆರಂಭ : ರಾಷ್ಟ್ರಪತಿ ದ್ರೌಪದಿ ಮುರ್ಮು ಚೊಚ್ಚಲ ಭಾಷಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಜೆಟ್ 2023: ಇಂದಿನಿಂದ ಸಂಸತ್‌ ಬಜೆಟ್ ಅಧಿವೇಶನವು ಪ್ರಾರಂಭವಾಗಲಿದೆ.
ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಅಧ್ಯಕ್ಷೆ ದ್ರೌಪದಿ ಮುರ್ಮು ಅವರ ಚೊಚ್ಚಲ ಭಾಷಣದೊಂದಿಗೆ ಇಂದಿನ ಬಜೆಟ್‌ ಅಧಿವೇಶನ ಆರಂಭಗೊಳ್ಳುತ್ತದೆ. ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆಯ ವರದಿಯನ್ನು ಮಂಡಿಸುತ್ತಾರೆ. ನಾಳೆ‌ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಮತ್ತು ಹಣಕಾಸು ಮಸೂದೆಗೆ ಅನುಮೋದನೆ ಪಡೆಯುವುದು ಸರ್ಕಾರದ ಆದ್ಯತೆಯಾಗಿದ್ದರೂ, ರಾಷ್ಟ್ರವ್ಯಾಪಿ ಜಾತಿ ಆಧಾರಿತ ಆರ್ಥಿಕ ಗಣತಿ, ಅದಾನಿ-ಹಿಂಡನ್‌ಬರ್ಗ್‌ ವಿವಾದ ಮತ್ತು ಮಹಿಳಾ ಮೀಸಲಾತಿ ಮಸೂದೆ ಸೇರಿದಂತೆ ಹಲವಾರು ವಿಷಯಗಳ ಮೇಲೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳು ಸಜ್ಜಾಗಿವೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಮೋದಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಜನಪ್ರಿಯ ಬಜೆಟ್ ಮಂಡನೆಯ ಸಾಧ್ಯತೆ ದಟ್ಟವಾಗಿದೆ.

ಅಧಿವೇಶನದ ಮೊದಲ ಭಾಗ ಫೆಬ್ರವರಿ 14 ರಂದು ಮುಕ್ತಾಯವಾಗಲಿದ್ದು, ಮಾ.12ರಿಂದ ಬಜೆಟ್‌ ಅಧಿವೇಶನದ ಚರ್ಚೆಯ ಎರಡನೆಯ ಕಂತು ಆರಂಭವಾಗಲಿದೆ.

ಸರ್ಕಾರ ಸೋಮವಾರ ಸರ್ವಪಕ್ಷ ಸಭೆ ನಡೆಸಿತು, ಇದರಲ್ಲಿ ವಿರೋಧ ಪಕ್ಷಗಳು ತಮ್ಮ ಕಾಳಜಿಯ ವಿಷಯಗಳನ್ನು ಪ್ರಸ್ತಾಪಿಸಿದವು. ವಿರೋಧ ಪಕ್ಷದ ನಾಯಕರು ಅದಾನಿ ಷೇರುಗಳು, ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ಮತ್ತು ವಿರೋಧ ಪಕ್ಷಗಳು ಆಳುವ ರಾಜ್ಯಗಳಲ್ಲಿ ರಾಜ್ಯಪಾಲರ ಹಸ್ತಕ್ಷೇಪದಂತಹ ವಿಷಯಗಳನ್ನು ಪ್ರಸ್ತಾಪಿಸಿದರು. ಆರ್‌ಜೆಡಿ, ಸಿಪಿಐ-ಎಂ, ಸಿಪಿಐ, ಎಎಪಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷಗಳು ಈ ವಿಷಯವನ್ನು ಪ್ರಸ್ತಾಪಿಸಿವೆ.

ಸೀತಾರಾಮನ್ ಅವರು ಸದನದಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ ನಂತರ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಅವರು ಆರ್ಥಿಕ ಸಮೀಕ್ಷೆಯ ಬಗ್ಗೆ ವಿವರಗಳನ್ನು ನೀಡಲು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಆರ್ಥಿಕ ಸಮೀಕ್ಷೆಯು ಕಳೆದ ವರ್ಷದಲ್ಲಿ ಆರ್ಥಿಕತೆಯು ಹೇಗೆ ಸಾಗಿತು ಎಂಬುದರ ಕುರಿತು ಸರ್ಕಾರದ ವಿಮರ್ಶೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!