ತೆರಿಗೆ ಭಾರವಿಲ್ಲದೆ ಸರ್ವರನ್ನು ಸಂತೃಪ್ತಿಪಡಿಸಿದ ಕೇಂದ್ರ ಬಜೆಟ್: ಸಚಿವ ನಿರಾಣಿ

ಹೊಸದಿಗಂತ ವರದಿ, ಕಲಬುರಗಿ:

ಜನಸಾಮಾನ್ಯರಿಗೆ ಹೊರೆಯಾಗದಂತೆ ಹೊಸ ತೆರಿಗೆಯನ್ನು ವಿಧಿಸದೆ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿ ಹಿರಿಯ ನಾಗರಿಕರು, ಮಹಿಳೆಯರು, ರೈತರು, ಕಾರ್ಮಿಕರು, ಮಧ್ಯಮ ವರ್ಗದವರು ಸೇರಿದಂತೆ ಪ್ರತಿಯೊಬ್ಬರಿಗೂ ಸಂತೃಪ್ತಿಪಡಿಸುವ ಕೇಂದ್ರ ಬಜೆಟ್ ಮಂಡನೆಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ,ಕಲಬುರಗಿ ಉಸ್ತುವಾರಿ ಸಚಿವ ಮುರುಗೇಶ್ ಆರ್.ನಿರಾಣಿ ಸಂತಸ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯಲ್ಲಿ ಪ್ರಸಕ್ತ 2023-24ನೇ ಸಾಲಿನ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಸರ್ವಸ್ಪರ್ಶಿ ಹಾಗೂ ಸರ್ವರನ್ನೊಳಗೊಂಡ ಸಮತೋಲನದ ಬಜೆಟ್ ಮಂಡಿಸಿದ್ದಾರೆ. ಇದು ಭವಿಷ್ಯದ ಬಜೆಟ್ ಎಂದು ನಿರಾಣಿ ಬಣ್ಣಿಸಿದ್ದಾರೆ.

ಈವರೆಗೂ ಇದ್ದ ರೂ. 5 ಲಕ್ಷವರೆಗಿನ ಆದಾಯ ತೆರಿಗೆ ಮಿತಿಯನ್ನು ರೂ. 7 ಲಕ್ಷದವರೆಗೆ ಹೆಚ್ಚಿಸಿರುವುದು ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದು ದೇಶವಾಸಿಗಳ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರು ಇಟ್ಟುಕೊಂಡಿರುವ ಕಳಕಳಿ ಎಂದು ಹೇಳಿದ್ದಾರೆ.

ಕರ್ನಾಟಕದ ಬಹುದಿನಗಳ ಬೇಡಿಕೆಯಾದ ಭದ್ರ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ 5300 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಅಲ್ಲದೆ ಇದು ರಾಜ್ಯದ ಮೊಟ್ಟಮೊದಲ ರಾಷ್ಟ್ರೀಯ ನೀರಾವರಿ ಯೋಜನೆಯಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ನಗರಗಳಿಗೆ ಕುಡಿಯುವ ನೀರು ಹಾಗೂ ನೀರಾವರಿಗೂ ಅನುಕೂಲವಾಗಲಿದೆ ಹಾಗು ಮನೆಮನೆಗೆ ನಲ್ಲಿ ನೀರು (ಹರ್ ಘರ್ ಜಲ್) ಯೋಜನೆಯ ವೇಗವರ್ಧನೆಗೆ ಕಾರಣ ಆಗಲಿದೆ ಎಂದು ನಿರಾಣಿ ತಿಳಿಸಿದ್ದಾರೆ.

ಕೋವಿಡ್ ನಂತರವೂ ಭಾರತ ತನ್ನ ಆರ್ಥಿಕತೆಯ ವೇಗದಿಂದಾಗಿ ಜಗತ್ತಿನ ಗಮನ ಸೆಳೆದಿದೆ. ರೈಲ್ವೆ ಇಲಾಖೆಯಲ್ಲಿ ಹೆಚ್ಚಿನ ಹಣ ಹೂಡಿಕೆ, ಯುವ ಉದ್ಯಮಿಗಳು, ಕೃಷಿ ಸ್ಟಾರ್ಟಪ್‍ಗಳಿಗೆ ಉತ್ತೇಜನ, ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಿದ್ದು, ಒಂದು ಜಿಲ್ಲೆ- ಒಂದು ಉತ್ಪನ್ನಕ್ಕೆ ಪ್ರೋತ್ಸಾಹ ಕೊಟ್ಟ ಆಯವ್ಯಯ ಪತ್ರ ಇದಾಗಿದೆ ಎಂದು ತಿಳಿಸಿದ್ದಾರೆ.

ಮಧ್ಯಮ ವರ್ಗದವರಿಗೆ ನೀಡಿರುವ ತೆರಿಗೆ ವಿನಾಯಿತಿ ಬಗ್ಗೆ ನಿರಾಣಿ ಸಂತಸ ಸೂಚಿಸಿದ್ದಾರೆ.

ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಎಂದು ಎಲ್ಲರನ್ನೂ ಒಳಗೊಳ್ಳುವ ಪ್ರಗತಿಯ ಗುರಿಯೊಂದಿಗೆ ಕೇಂದ್ರ ಸರ್ಕಾರ ಉತ್ತಮ ಬಜೆಟ್ ಮಂಡನೆಯಾಗಿದೆ. 2019 ನೇ ಆರ್ಥಿಕ ವರ್ಷದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒಟ್ಟು ಬಜೆಟ್‍ನಲ್ಲಿ ಶೇ.1.4 ರಷ್ಟು ಅನುದಾನ ಮೀಸಲಿಟ್ಟಿದ್ದು, 2023 ನೇ ಸಾಲಿನಲ್ಲಿ ಶೇ.2.1ರಷ್ಟು ಮೀಸಲಿಡಲಾಗಿದೆ. ಈ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಇನ್ನಷ್ಟು ಆದ್ಯತೆ ನೀಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

2014 ರಿಂದ ದೇಶದಲ್ಲಿ ವಿವಿಧೆಡೆ 157 ಮೆಡಿಕಲ್ ಕಾಲೇಜುಗಳೊಂದಿಗೆ 157 ಹೊಸ ನರ್ಸಿಂಗ್ ಕಾಲೇಜುಗಳ ಆರಂಭ, ಸಿಕಲ್ ಸೆಲ್ ಅನೀಮಿಯಾದ ನಿವಾರಣೆಗಾಗಿ ಪ್ರತ್ಯೇಕವಾದ ಅಭಿಯಾನ, ಚರ್ಮಾ ಉದ್ಯಮದಲ್ಲಿ ಸಂಶೋಧನೆಗೆ ಪ್ರೋತ್ಸಾಹಿಸಲು ಕಾರ್ಯಕ್ರಮ, ನಿಗದಿತ ಐ.ಸಿ.ಎಂ.ಆರ್ ಲ್ಯಾಬ್‍ಗಳಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಸಂಶೋಧನೆಗೆ ಕಾರ್ಯಕ್ರಮ ರೂಪಿಸುವುದಾಗಿ ಬಜೆಟ್‍ನಲ್ಲಿ ತಿಳಿಸಲಾಗಿದೆ. ಇದು ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆಗಳು ಎಂದು ಸಚಿವರು ಶ್ಲಾಘಿಸಿದ್ದಾರೆ.
ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಸಮ್ಮಾನ್ ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದು, ಈ ಯೋಜನೆಯಡಿ ಮಹಿಳೆಯರಿಗೆ ಶೇ.7 ಬಡ್ಡಿ ದರದಲ್ಲಿ ರೂ.2 ಲಕ್ಷದವರೆಗೆ ಮಹಿಳಾ ಸಮ್ಮಾನ್ ಪ್ರಮಾಣ ಪತ್ರದಡಿ ಠೇವಣಿ ಇಡುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಸಚಿವ ಮುರುಗೇಶ್ ಆರ್.ನಿರಾಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!