ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣದುಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ತನ್ ಬಡ್ಡಿದರಗಳನ್ನು ಏರಿಕೆ ಮಾಡಿದೆ. ಇದರ ಪರಿಣಾಮವಾಗಿ ಗುರುವಾರ ಮುಂಜಾನೆಯ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಯು ಮತ್ತಷ್ಟು ಏರಿಕೆಯಾಗಿದ್ದು ಡಾಲರ ಬೆಲೆಯು ಕುಸಿದಿದೆ.
ಫೆಡರಲ್ ರಿಸರ್ವ್ ತನ್ನ ಬಡ್ಡಿದರಗಳನ್ನು 25 ಬೇಸಿಸ್ ಪಾಯಿಂಟ್ ಏರಿಸಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಈ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. “ಹಣದುಬ್ಬರವು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ ಆದರೆ ಇನ್ನೂ ಕಡಿಮೆಯಾಗಬೇಕಿದೆ” ಎಂದು ಬ್ಯಾಂಕ್ ವಿವರಣೆ ನೀಡಿದೆ. ಕಳೆದ 40 ವರ್ಷಗಳ್ಲಲಿಯೇ ಇದು ಅತ್ಯಂತ ಹೆಚ್ಚಿನ ಹಣದುಬ್ಬರವಾಗಿದ್ದು ಬೆಲೆಏರಿಕೆಯು ಅತ್ಯಧಿಕವಾಗಿದೆ ಎನ್ನಲಾಗಿದೆ.
ಯುಎಸ್ ಫೆಡ್ ಬಡ್ಡಿದರಗಳನ್ನು ಹೆಚ್ಚಿಸಿದ ಪರಿಣಾಮ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಬ್ಯಾರೆಲ್‌ಗೆ 56 ಸೆಂಟ್‌ಗಳು ಅಥವಾ 0.7 ಶೇ.ದಷ್ಟು ಏರಿದ್ದು ಪ್ರತಿ ಬ್ಯಾರೆಲ್ ಗೆ 83.40 ಡಾಲರ್ ಗೆ ತಲುಪಿದೆ. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಫ್ಯೂಚರ್ಸ್ 65 ಸೆಂಟ್‌ಗಳು ಅಥವಾ 0.8 ಶೇ.ದಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ 77.05ಡಾಲರ್ ಗೆ ತಲುಪಿದೆ.
ಇದರ ಜತೆಗೇ ಯುರೋಪಿಯನ್ ಒಕ್ಕೂಟವು ರಷ್ಯಾದ ತೈಲದ ಮೇಲೆ ಹೆಚ್ಚಿನ ನಿರ್ಬಂಧ ವಿಧಿಸಲು ಮುಂದಾಗಿರುವ ಹಿನ್ನೆಲೆಯೂ ಕೂಡ ಕಚ್ಚಾತೈಲ ಬೆಲೆಯಲ್ಲಿನ ಏರಿಕೆಗೆ ಕಾರಣವಾಗಿದೆ.