ಹೊಸದಿಗಂತ ಡಿಜಿಟಲ್ ಡೆಸ್ಕ್:
ಶತಕೋಟಿ ಡಾಲರುಗಳ ಅದಾನಿ ಸಾಮ್ರಾಜ್ಯವು ಅಮರಿಕದ ತನಿಖಾ ಸಂಸ್ಥೆ ಹಿಂಡೆನ್ಬರ್ಗ್ ವರದಿಯಿಂದ ಅದಾನಿ ಸಮೂಹಕ್ಕೆ ಭಾರೀ ಹಿನ್ನಡೆಯಾಗಿದ್ದು ಬುಧವಾರ ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟವನ್ನು ಕಂಡಿದೆ.
ಹಿಂಡೆನ್ ಬರ್ಗ್ ವರದಿಯು ಪ್ರಕಟವಾದಾಗಿನಿಂದಲೇ ಅದಾನಿ ಎಂಟರ್ಪ್ರೈಸಸ್ ಹಾಗು ಇತರೆ ಏಳು ಕಂಪನಿಗಳ ಷೇರುಗಳು ಭಾರೀ ಪ್ರಮಾಣದಲ್ಲಿ ಕುಸಿದಿವೆ. ಇದರಿಂದಾಗಿ ಅದಾನಿ ಸಮೂಹಕ್ಕೆ ಲಕ್ಷಕೋಟಿ ರೂಪಾಯಿಗಳ ಲೆಕ್ಕದಲ್ಲಿ ನಷ್ಟವಾಗಿದೆ. ಈ ನಡುವೆ ಹಿಂಡೆನ್ ಬರ್ಗ್ ವರದಿಯ ಕುರಿತು ಸ್ಪಷ್ಟನೆ ನೀಡುವ ಪ್ರಯತ್ನದ ಮೂಲಕ ಅದಾನಿ ಸಮೂಹ ಹಿಂಡೆನ್ ಬರ್ಗ್ ವಿರುದ್ಧ ನೇರವಾಗಿ ಯುದ್ಧಕ್ಕಿಳಿದಿತ್ತು. ಹೂಡಿಕೆದಾರರನ್ನು ಒಗ್ಗೂಡಿಸಿ ಅದಾನಿ ಎಂಟರ್ಪ್ರೈಸಸ್ 20 ಸಾವಿರ ಕೋಟಿ ರೂಪಾಯಿ ಮೌಲ್ಯದ ಫಾಲೋ ಅಪ್ ಎಪ್ಪಿಓ ಗಳನ್ನು ಬಿಡುಗಡೆ ಮಾಡಿತ್ತು. ಆದರೆ ಬುಧವಾರದಂದು ಅದಾನಿ ಎಂಟರ್ಪ್ರೈಸಸ್ ಷೇರುಗಳು ಮತ್ತಷ್ಟು ಕುಸಿತಕ್ಕೊಳಗಾದ ಪರಿಣಾಮ ಇದೀಗ ಎಫ್ಪಿಓವನ್ನು ಅದಾನಿ ಸಮೂಹವು ಹಿಂಪಡೆಯಲು ನಿರ್ಧರಿಸಿದೆ. ನಷ್ಟವನ್ನು ತುಂಬಿಕೊಳ್ಳಲು ಅದಾನಿ ಸಮೂಹವು ಈ ನಿರ್ಧಾರ ಕೈಗೊಂಡಿದ್ದು ಹೂಡಿಕೆದಾರರಿಗೆ ಹಣವನ್ನು ಮರಳಿಸಲಿದೆ.
ಈ ಕುರಿತು ಸ್ವತಃ ಗೌತಮ್ ಅದಾನಿ ಪ್ರತಿಕ್ರಿಯಿಸಿದ್ದು “FPO ಹಿಂತೆಗೆದುಕೊಳ್ಳುವಿಕೆಯ ನಿರ್ಧಾರವು ಅನೇಕರನ್ನು ಆಶ್ಚರ್ಯಗೊಳಿಸಿರಬಹುದು. ಆದರೆ ನಿನ್ನೆ ಕಂಡುಬಂದ ಮಾರುಕಟ್ಟೆಯ ಚಂಚಲತೆಯನ್ನು ಪರಿಗಣಿಸಿ, ಎಫ್ಪಿಒನೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಾಗಿರುವುದಿಲ್ಲ ಎಂದು ನಮ್ಮ ಮಂಡಳಿಯು ಬಲವಾಗಿ ಭಾವಿಸಿದೆ. ನನಗೆ, ನನ್ನ ಹೂಡಿಕೆದಾರರ ಹಿತಾಸಕ್ತಿ ಅತಿಮುಖ್ಯ ಮತ್ತು ಉಳಿದೆಲ್ಲವೂ ಗೌಣ. ಆದ್ದರಿಂದ ಸಂಭಾವ್ಯ ನಷ್ಟದಿಂದ ಹೂಡಿಕೆದಾರರನ್ನು ರಕ್ಷಿಸಲು ನಾವು ಎಫ್ಪಿಒವನ್ನು ಹಿಂತೆಗೆದುಕೊಂಡಿದ್ದೇವೆ,” ಎಂದಿದ್ದಾರೆ.
ಇದು ಹಿಂಡೆನ್ ಬರ್ಗ್ ವಿರುದ್ಧ ಅದಾನಿ ಸಮೂಹಕ್ಕೆ ಉಂಟಾದ ಸೋಲು ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.