ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ಏಕದಿನ ಸರಣಿಗಳಲ್ಲಿ ಟೀಂ ಇಂಡಿಯಾದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಮ್ಮ ಶ್ರೇಷ್ಠ ಫಾರ್ಮ್‌ನ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಸೌತ್ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಅಬ್ಬರಿಸಿ ಮಿಂಚಿದರು. ಆದರೂ ಇವರಿಬ್ಬರ 2027ರ ಏಕದಿನ ವಿಶ್ವಕಪ್ ಭವಿಷ್ಯ ಇನ್ನೂ ಸ್ಪಷ್ಟವಾಗಿಲ್ಲ ಎಂಬ ಚರ್ಚೆ ಬಲ ಪಡೆಯುತ್ತಿದೆ.
ಈ ಚರ್ಚೆಗೆ ಕಾರಣ ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ನೀಡಿರುವ ಹೇಳಿಕೆ. ಸೌತ್ ಆಫ್ರಿಕಾ ವಿರುದ್ಧದ ಸರಣಿ ಬಳಿಕ ಮಾತನಾಡಿದ ಗಂಭೀರ್, 2027ರ ವಿಶ್ವಕಪ್ ಇನ್ನೂ ದೂರದಲ್ಲಿದ್ದು, ತಂಡವು ವರ್ತಮಾನಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಹೇಳಿದರು. ಜೊತೆಗೆ, ಯುವ ಆಟಗಾರರು ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡಿರುವುದನ್ನು ಉಲ್ಲೇಖಿಸಿದರು. ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಸೇರಿದಂತೆ ಹೊಸ ಆಟಗಾರರು ಸೆಂಚುರಿಗಳೊಂದಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ ಎಂದು ಗಂಭೀರ್ ಪ್ರಶಂಸೆ ವ್ಯಕ್ತಪಡಿಸಿದರು.
ಆದರೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮುಂದಿನ ವಿಶ್ವಕಪ್ ಕಣಕ್ಕಿಳಿಯುವರೇ ಎಂಬ ಪ್ರಶ್ನೆಗೆ ಗಂಭೀರ್ ನೇರ ಉತ್ತರ ನೀಡಲಿಲ್ಲ. ಇದುವೇ ಕ್ರಿಕೆಟ್ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಇತ್ತೀಚಿನ ಪ್ರದರ್ಶನ ನೋಡಿದರೆ ಇವರಿಬ್ಬರನ್ನು ತಕ್ಷಣವೇ ಏಕದಿನ ತಂಡದಿಂದ ಕೈಬಿಡುವುದು ಅಸಾಧ್ಯ ಎನ್ನುವ ಅಭಿಪ್ರಾಯವೂ ಕೇಳಿಬರುತ್ತಿದೆ. ಆದರೂ ಟೀಂ ಇಂಡಿಯಾ ನಿರ್ವಹಣೆ ಯುವ ಹಾಗೂ ಅನುಭವಿ ಆಟಗಾರರ ನಡುವಿನ ಸಮತೋಲನದ ಕುರಿತು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದೇ ಈಗ ಎಲ್ಲರ ಕುತೂಹಲವಾಗಿದೆ.

