ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶೀಯ ವಿಮಾನ ಪ್ರಯಾಣಿಕರ ಮೇಲೆ ಹೆಚ್ಚುತ್ತಿರುವ ದರದ ಒತ್ತಡಕ್ಕೆ ತಡೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಆದೇಶಕ್ಕೆ ಏರ್ ಇಂಡಿಯಾ ಅಧಿಕೃತವಾಗಿ ಪ್ರತಿಕ್ರಿಯಿಸಿದೆ. ಪರಿಷ್ಕೃತ ಟಿಕೆಟ್ ದರ ಮಿತಿಗಳನ್ನು ಸಂಪೂರ್ಣವಾಗಿ ಪಾಲಿಸುವುದಾಗಿ ಸಂಸ್ಥೆ ಸೋಮವಾರ ಪ್ರಕಟಣೆ ಮೂಲಕ ತಿಳಿಸಿದೆ.
ನಾಗರಿಕ ವಿಮಾನಯಾನ ಸಚಿವಾಲಯವು (MoCA) ಎಕಾನಮಿ ಕ್ಲಾಸ್ ವಿಮಾನ ಟಿಕೆಟ್‌ಗಳ ಮೂಲ ದರಕ್ಕೆ ಗರಿಷ್ಠ ಮಿತಿ ನಿಗದಿಪಡಿಸಿ ನಿರ್ದೇಶನ ನೀಡಿತ್ತು. ಈ ಆದೇಶ ಪ್ರಕಟವಾದ ಕೂಡಲೇ ಏರ್ ಇಂಡಿಯಾ ಗ್ರೂಪ್ ತನ್ನ ಎಲ್ಲಾ ಬುಕ್ಕಿಂಗ್ ವ್ಯವಸ್ಥೆಗಳಲ್ಲಿ ಹೊಸ ದರಗಳನ್ನು ಅನ್ವಯಿಸಲು ಪ್ರಕ್ರಿಯೆ ಆರಂಭಿಸಿದೆ ಎಂದು ಸಂಸ್ಥೆ ಹೇಳಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಬದಲಾವಣೆಯನ್ನು ಸಂಪೂರ್ಣವಾಗಿ ಜಾರಿಗೆ ತಂದಿದ್ದು, ಏರ್ ಇಂಡಿಯಾ ಕೆಲವು ಗಂಟೆಗಳ ಒಳಗೆ ಹಂತ ಹಂತವಾಗಿ ಅನುಷ್ಠಾನ ಪೂರ್ಣಗೊಳಿಸುವ ನಿರೀಕ್ಷೆಯಿದೆ.
ಪ್ರಯಾಣಿಕರ ಬುಕ್ಕಿಂಗ್ ಪ್ರಕ್ರಿಯೆಗೆ ತೊಂದರೆಯಾಗದಂತೆ ಜಾಗರೂಕತೆಯಿಂದ ಈ ಬದಲಾವಣೆಗಳನ್ನು ಜಾರಿಗೆ ತರುತ್ತಿರುವುದಾಗಿ ಸಂಸ್ಥೆ ಸ್ಪಷ್ಟಪಡಿಸಿದೆ. ಈ ಮಧ್ಯಂತರ ಅವಧಿಯಲ್ಲಿ ಎಕಾನಮಿ ಕ್ಲಾಸ್‌ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಮೂಲ ದರದಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿರುವ ಪ್ರಯಾಣಿಕರಿಗೆ ಹೆಚ್ಚುವರಿ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಇದರ ನಡುವೆ ಇಂಡಿಗೋ ವಿಮಾನಗಳ ಕಾರ್ಯಾಚರಣೆಯ ಅಡಚಣೆ ಏಳನೇ ದಿನಕ್ಕೂ ಕಾಲಿಟ್ಟಿದ್ದು, ಡಿಸೆಂಬರ್ 10ರ ವೇಳೆಗೆ ಸೇವೆಗಳು ಸಾಮಾನ್ಯ ಸ್ಥಿತಿಗೆ ಹಿಂದಿರುಗುವ ಸಾಧ್ಯತೆ ಇದೆ ಎಂದು ವಿಮಾನಯಾನ ವಲಯ ಮಾಹಿತಿ ನೀಡಿದೆ.

