ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕರ್ನಾಟಕ ಎದುರಿಸುತ್ತಿರುವ ಕೃಷಿ ಹಾಗೂ ಅಭಿವೃದ್ಧಿ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರ ಇನ್ನೂ ಸ್ಪಷ್ಟ ನಿಲುವು ತೋರಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಕಬ್ಬು ಬೆಳೆಗಾರರು ಮತ್ತು ಮೆಕ್ಕೆಜೋಳ ರೈತರ ವಿಚಾರದಲ್ಲಿ ರಾಜ್ಯ ಸರ್ಕಾರ ರೈತರ ಪರವಾಗಿ ನಿರ್ಧಾರ ಕೈಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು, ಈ ತೀರ್ಮಾನಗಳಿಂದ ರಾಜ್ಯ ಖಜಾನೆಗೆ ದೊಡ್ಡ ಹೊರೆ ಬಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸೇರಿ ನಾವು ಜವಾಬ್ದಾರಿಯಿಂದ ಮುಂದೆ ಬಂದಿದ್ದೇವೆ ಎಂದು ಹೇಳಿದರು. ಆದರೆ ಬೆಲೆ ನಿಗದಿ ಹಾಗೂ ಖರೀದಿ ನೀತಿಗಳ ಅಧಿಕಾರವಿರುವ ಕೇಂದ್ರ ಸರ್ಕಾರ ಈವರೆಗೆ ಮೌನವಾಗಿರುವುದು ಅಸಮಂಜಸ ಎಂದು ಡಿಕೆ ಶಿವಕುಮಾರ್ ಟೀಕಿಸಿದರು.
ಬಿಜೆಪಿ ಸಂಸದರು ಸಂಸತ್ತಿನಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಆರೋಪಿಸಿದ ಅವರು, ಬೊಮ್ಮಾಯಿ ಅವರು ರಾಜ್ಯ ಸರ್ಕಾರದ ಮೇಲೆ ಹೊಣೆ ಹಾಕುವ ಬದಲು ಕೇಂದ್ರ ಕೃಷಿ ಸಚಿವರು ಹಾಗೂ ಪ್ರಧಾನಮಂತ್ರಿಯನ್ನು ಭೇಟಿಯಾಗಿ ಚರ್ಚಿಸಬೇಕಿತ್ತು ಎಂದರು. ಪರಿಹಾರ ಕೊಡುವ ಮನಸ್ಥಿತಿಯೇ ಸಮಸ್ಯೆಗೆ ಉತ್ತರ ಎಂದು ಹೇಳಿದರು.

