ಜಾಗತಿಕ ತೈಲ ಸಮರದಲ್ಲಿ ಭಾರತ ಪ್ರಾಮುಖ್ಯತೆ ಗಳಿಸುತ್ತಿರೋದು ಹೀಗೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಷ್ಯಾ-ಉಕ್ರೇನ್‌ ಸಮರದ ಕಾರಣದಿಂದ ಅಮೆರಿಕ, ಯುರೋಪ್‌ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾವನ್ನು ಕಟ್ಟಿಹಾಕಲು ರಷ್ಯಾದ ತೈಲವನ್ನು ನಿರ್ಬಂಧಿಸಿವೆ. ಆದರೆ ಭಾರತ ಮಾತ್ರ ಪಾಶ್ಚಾತ್ಯ ದೇಶಗಳನ್ನು ಎದರು ಹಾಕಿಕೊಂಡು ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲವನ್ನು ಖರೀದಿಸುವ ನಿರ್ಧಾರ ಕೈಗೊಂಡಿತು. ಆರಂಭದಲ್ಲಿ ಭಾರತದ ವಿರುದ್ಧ ಪಾಶ್ಚಾತ್ಯ ದೇಶಗಳು ವ್ಯಾಪಕವಾಗಿ ಟೀಕಿಸಿದರೂ ಕೂಡ ಭಾರತ ಮಾತ್ರ ತನ್ನ ನಿರ್ಣಯದಿಂದ ಹಿಂದೆ ಸರಿದಿರಲಿಲ್ಲ. ಭಾರತದ ಈ ನಿರ್ಧಾರ ಈಗ ಭಾರತಕ್ಕೆ ಲಾಭ ತಂದುಕೊಡುವುದರೊಂದಿಗೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರತಕ್ಕೆ ನಿರ್ಣಾಯಕ ಸ್ಥಾನವನ್ನೂ ತಂದುಕೊಡುತ್ತಿದೆ.

ಇತ್ತೀಚಿನ ಬದಲಾವಣೆಗಳನ್ನು ಗಮನಿಸಿದಾಗ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲವನ್ನು ಆಮದು ಮಾಡಿಕೊಂಡ ಭಾರತವು ಅದನ್ನು ಶುದ್ಧೀಕರಿಸಿ ಇಂಧನವನ್ನು ಪಾಶ್ಚಾತ್ಯ ದೇಶಗಳಿಗೆ ಮಾರಾಟ ಮಾಡುವ ಮೂಲಕ ಲಾಭ ಗಳಿಸುತ್ತಿದೆ. ಅಲ್ಲದೇ ರಷ್ಯಾವು ತನ್ನ ತೈಲವನ್ನು ಮಾರುಕಟ್ಟೆಗೆ ತರಲು ಜಾಗತಿಕವಾಗಿ ಚಾಲ್ತಿಯಲ್ಲಿರುವ ತೈಲಮಾರುಕಟ್ಟೆಗೆ ಪರ್ಯಾಯವಾಗಿ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲು ಯತ್ನಿಸುತ್ತಿದ್ದು ಭಾರತವು ಈ ವ್ಯವಸ್ಥೆಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ.

ತೈಲಮಾರುಕಟ್ಟೆಯಿಂದ ರಷ್ಯಾವನ್ನು ಸಂಪೂರ್ಣವಾಗಿ ಹೊರಹಾಕಿ ರಷ್ಯಾದ ತೈಲ ಆದಾಯವನ್ನು ಕುಗ್ಗಿಸುವುದು ಅಮೆರಿಕದಂತಹ ಪಾಶ್ಚಾತ್ಯ ದೇಶಗಳ ಉದ್ದೇಶ. ಆದರೆ, ಭಾರತವು ಈ ವ್ಯವಸ್ಥೆಯನ್ನು ತನ್ನ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳುತ್ತಿದೆ. ಕಡಿಮೆ ಬೆಲೆಗೆ ರಷ್ಯಾದ ತೈಲವನ್ನು ಖರೀದಿಸಿ, ಅವುಗಳನ್ನು ಶುದ್ಧೀಕರಿಸಿ ಮಾರುಕಟ್ಟೆ ಬೆಲೆಯಲ್ಲಿ ಅವುಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭಗಳಿಸುತ್ತಿದೆ ಎಂದು ಇತ್ತೀಚಿನ ಕೆಲ ವರದಿಗಳು ತೋರಿಸಿವೆ.

ಲಭ್ಯವಿರೋ ಮಾಹಿತಿಯ ಪ್ರಕಾರ ಕಳೆದ ತಿಂಗಳು ಭಾರತವು ದಿನಕ್ಕೆ ಸುಮಾರು 89,000 ಬ್ಯಾರೆಲ್ ಗ್ಯಾಸೋಲಿನ್ ಮತ್ತು ಡೀಸೆಲ್ ಅನ್ನು ನ್ಯೂಯಾರ್ಕ್‌ಗೆ ರವಾನಿಸಿದೆ, ಇದು ನಾಲ್ಕು ವರ್ಷಗಳಲ್ಲಿ ಅತಿ ಹೆಚ್ಚಿನ ಪ್ರಮಾಣ ಎನ್ನಲಾಗಿದೆ.

ಭಾನುವಾರ ಯುರೋಪಿಯನ್‌ ರಾಷ್ಟ್ರಗಳು ರಷ್ಯಾದ ತೈಲದ ಮೇಲೆ ಇನ್ನೂ ಹೆಚ್ಚಿನ ನಿರ್ಬಂಧವನ್ನು ವಿಧಿಸಿದ್ದು ಇದು ಡೀಸೆಲ್‌ ಹರಿವನ್ನು ನಿಷೇಧಿಸುವ ಗುರಿ ಹೊಂದಿದೆ. ಪರಿಣಾಮ ಯುರೋಪಿನಾದ್ಯಂತ ಡೀಸೆಲ್‌ ಗೆ ಬೇಡಿಕೆ ಹೆಚ್ಚಲಿದ್ದು ಭಾರತದಂತಹ ಏಷ್ಯಾದ ದೇಶಗಳಿಗೆ ಈ ಬೇಡಿಕೆಯನ್ನು ಪೂರೈಸುವ ಅವಕಾಶ ಸಿಗಲಿದೆ. ಭಾರತವು ಸಂಸ್ಕರಿಸಿದ ಉತ್ಪನ್ನದ ನಿವ್ವಳ ರಫ್ತುದಾರನಾಗಿದ್ದು ಈ ತೈಲ ನಿರ್ಬಂಧದ ನಡುವೆ ಇಂಧನ ಹರಿವನ್ನು ಸರಾಗಗೊಳಿಸುವ ಪ್ರಮುಖ ಪಾತ್ರ ನಿರ್ವಹಿಸುವ ಹಂತಕ್ಕೆ ತಲುಪಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ತೈಲಗಳು ಭಾರತದಿಂದ ಸರಬರಾಜು ಮಾಡಲ್ಪಟ್ಟರೆ ಅದು ಪಾಶ್ಚಾತ್ಯ ದೇಶಗಳ ನಿಯಮಗಳಿಗೆ ತೊಡಕುಂಟು ಮಾಡುವುದಿಲ್ಲ. ಏಕೆಂದರೆ ಭಾರತದಿಂದ ಪೂರೈಸಲ್ಪಟ್ಟ ಇಂಧನವು ರಷ್ಯಾ ಮೂಲದಿಂದ ಬಂದ ತೈಲವಲ್ಲ ಎಂದು ಯುರೋಪ್‌ ಪರಿಗಣಿಸಲಿದೆ. ಇಲ್ಲಿ ಅರ್ಥಮಾಡಿಕೊಳ್ಳಬೇಕಿರೋ ಅಂಶವೇನೆಂದರೆ ತೈಲ ಮಾರುಕಟ್ಟೆಯಲ್ಲಿ ತೈಲದ ಹರಿವಿಗೆ ತೊಂದರೆಯಾಗದಂತೆ ರಷ್ಯಾದ ಆದಾಯವನ್ನೂ ಕಡಿಮೆ ಮಾಡುವ ಉದ್ದೇಶ ಪಾಶ್ಚಾತ್ಯರದ್ದು. ತೈಲ ಮಾರುಕಟ್ಟೆಯ ಹರಿವು ಸರಾಗವಾಗಿರಬೇಕಾದರೆ, ರಷ್ಯಾದ ತೈಲ ಪೂರೈಕೆಯು ಸ್ಥಗಿತವಾಗಬಾರದು. ಹೀಗಾಗಿ ಭಾರತದಿಂದ ಯುರೋಪಿಯನ್‌ ದೇಶಗಳು ಸಂಸ್ಕರಿಸಿದ ಇಂಧನವನ್ನು ಪಡೆದುಕೊಂಡರೆ ತೈಲಮಾರುಕಟ್ಟೆಯಲ್ಲಿ ತೈಲ ಹರಿವಿಗೂ ತೊಂದರೆಯಾಗುವುದಿಲ್ಲ. ತೈಲ ಮಾರುಕಟ್ಟೆ ಸ್ಥಿರವಾಗಿಯೇ ಉಳಿಯುತ್ತದೆ ಎಂಬ ಲೆಕ್ಕಾಚಾರವೊಂದು ಇದರ ಹಿಂದೆ ಕಾರ್ಯನಿರ್ವಹಿಸುತ್ತಿದೆ. ರಷ್ಯಾದ ತೈಲದ ಮೇಲಿನ ಬೆಲೆ ನಿರ್ಬಂಧವು ಒಪೆಕ್‌ ದೇಶಗಳ ತೈಲ ಬೆಲೆಯ ಇಳಿಕೆಗೂ ಕಾರಣವಾಗಿದೆ ಎಂದೂ ವರದಿಗಳಾಗಿವೆ. ಒಟ್ಟಿನಲ್ಲಿ ಹೇಳುವುದಾದರೆ ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಅಗತ್ಯತೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತ, ರಷ್ಯಾದ ತೈಲ ಆದಾಯವನ್ನು ಕಡಿಮೆ ಮಾಡಲು ಯೋಚಿಸಿವೆ. ಇದು ರಿಯಾಯಿತಿ ದರದಲ್ಲಿ ಭಾರತಕ್ಕೆ ತೈಲ ಪೂರೈಕೆಗೂ ಕಾರಣವಾಗಿರುವುದರ ಜೊತೆಗೆ ಈ ಜಾಗತಿಕ ತೈಲ ಸಮರದಲ್ಲಿ ಭಾರತವು ಪ್ರಾಮುಖ್ಯತೆಗಳಿಸಲು ದಾರಿಮಾಡಿಕೊಡುತ್ತಿದೆ. ಭಾರತದ ಪಾಲಿಗೆ ಇದು ಆಸಕ್ತಿಕರ ಬೆಳವಣಿಗೆ ಎನ್ನಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!