-ವೆಂಕಟೇಶ ದೇಸಾಯಿ
ಬಳ್ಳಾರಿ ಜಿಲ್ಲೆಯ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಹಂಪಿ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಅದರಲ್ಲೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಹಂಪಿ ಉಳಿವಿಗಾಗಿ ವಿಶೇಷ ಕಾಳಜಿ, ಆಸಕ್ತಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಮಾಡಿದೆ.
ನೆತ್ತಿಯ ಮೇಲೆ ಪ್ರಖರ ಬಿಸಿಲನ್ನು ಲೆಕ್ಕಿಸದೆ ದೇಶ ವಿದೇಶಗಳಿಂದ ಪ್ರವಾಸಿಗರ ದಂಡೇ ಹಂಪಿಯ ವಿವಿಧ ಸ್ಮಾರಕಗಳನ್ನು ವೀಕ್ಷಿಸಲು ಆಗಮಿಸುತ್ತಿದೆ. ಇಲ್ಲಿನ ಸ್ಮಾರಕಗಳನ್ನು ವೀಕ್ಷಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ. ವಿಜಯನಗರ ಹಾಗೂ ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಪ್ರವಾಸಿಗರು ಹಂಪಿ ವೀಕ್ಷಣೆಗೆ ಬರುತ್ತಿದ್ದಾರೆ. ಬಹುತೇಕ ಪ್ರವಾಸಿಗರು ಸ್ಮಾರಕಗಳ ಎದುರು ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಸಾಮಾನ್ಯವಾಗಿದೆ.
ಟೂರಿಸ್ಂ ಬೆಳವಣಿಗೆಗೆ ಪುಷ್ಟಿ:
ಜನವರಿ, ಫೆಬ್ರುವರಿ ತಿಂಗಳಿಗಿಂತ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲಿದ್ದಾರೆ. ಇದು ಈ ಭಾಗದಲ್ಲಿ ಟೂರಿಸ್ಂ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಬೇಸಿಗೆ ಕಾಲದಲ್ಲಿ ಹಂಪಿಯ ಸ್ಮಾರಕಗಳನ್ನು ಬೆಳ್ಳಂಬೆಳಗ್ಗೆ ವೀಕ್ಷಿಸುವುದೇ ಬಲು ಚಂದ. ಅದರಲ್ಲೂ ಬೆ.6 ರಿಂದ 10ರ ವರೆಗೆ ಹಂಪಿಯ ವಿಜಯ ವಿಠ್ಠಲ ಮಂದಿರ, ಪುರುಂದರ ದಾಸರ ಮಂಟಪ, ತುಂಗಭದ್ರ ನದಿ ತೀರವನ್ನು ವೀಕ್ಷಿಸುವುದೇ ಬಲು ಆನಂದ. ಈ ಪರಿಸರದಲ್ಲಿ ಬೀಡು ಬಿಟ್ಟಿರುವ ವಿವಿಧ ಜಾತಿಯ ಪಕ್ಷಿ ಸಂಕುಲಗಳು ಪ್ರವಾಸಿಗರನ್ನು ಗಮನಸೆಳೆಯುತ್ತಿವೆ. ಸಂಜೆ ವೇಳೆ, ಕಮಲ್ ಮಹಲ್, ಹೇಮಕೂಟ, ಮಹಾನವಮಿ ದಿಬ್ಬ, ಗಜಶಾಲೆಯನ್ನು ಕಣ್ತುಂಬಿಕೊಂಡು, ಹಂಪಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಪ್ರವಾಸಿಗರ ಭೇಟಿ:
ಹಂಪಿ ವೀಕ್ಷಣೆಗೆ ದೇಶ, ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ. ಜನವರಿ ತಿಂಗಳಲ್ಲಿ 33,798 ದೇಶೀಯ ಪ್ರವಾಸಿಗರು, 187 ವಿದೇಶಿ ಪ್ರವಾಸಿಗರು, ಕಳೆದ ಫೆಬ್ರವರಿ ತಿಂಗಳಲ್ಲಿ 40,407 ದೇಶಿಯ ಪ್ರವಾಸಿಗರು, 277ವಿದೇಶಿ ಪ್ರವಾಸಿಗರು, ಮಾರ್ಚ್ನಲ್ಲಿ 44,597 ದೇಶಿಯ ಪ್ರವಾಸಿಗರು, 317 ವಿದೇಶಿ ಪ್ರವಾಸಿಗರು, ಏಪ್ರಿಲ್ ತಿಂಗಳಲ್ಲಿ 44,633 ದೇಶೀಯ, 211 ವಿದೇಶಿ ಪ್ರವಾಸಿಗರು ಹಂಪಿಗೆ ಭೇಟಿ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಹರಿಹರ ಪಂಚಮಸಾಲಿ ಪೀಠದ ಬವಚನಾನಂದ ಸ್ವಾಮೀಜಿ, ಯುರೋಪ್ ರಾಷ್ಟ್ರಗಳ ರಾಯಭಾರಿಗಳು, ಸೇರಿದಂತೆ ವಿವಿಧ ಖ್ಯಾತ ಚಿತ್ರ ನಟ, ನಟಿಯರು ಭೇಟಿ ನೀಡಿ ಹಂಪಿಯ ಸೊಬಗನ್ನು ಸವಿದಿದ್ದಾರೆ.