Monday, December 8, 2025

ರಕ್ತದಲ್ಲೇ ನಮ್ಮ ಭಾಷೆ ಇದೆ, ಯಾವ ಕನ್ನಡ ಶಾಲೆಗಳನ್ನೂ ಮುಚ್ಚೋದಿಲ್ಲ: ಮಧು ಬಂಗಾರಪ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ರಕ್ತದಲ್ಲಿ ಕನ್ನಡವಿದೆ. ಹಾಗಾಗಿ ಕನ್ನಡ ಮಾಧ್ಯಮದ ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಚಿದಾನಂದ್ ಎಂ ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2025-26ನೇ ಸಾಲಿನಲ್ಲಿ 900 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಒಂದು ಕೆಪಿಎಸ್ ಶಾಲೆಯನ್ನು ಹಂತ ಹಂತವಾಗಿ ಪ್ರಾರಂಭಿಸಲು ಕ್ರಮವಹಿಸಲಾಗುವುದು ಎಂದರು

ನಾವು ಬಜೆಟ್‌ನಲ್ಲಿ 500 ಕೆಪಿಎಸ್ ಶಾಲೆಗಳನ್ನು ಆರಂಭಿಸುವ ಘೋಷಣೆ ಮಾಡಿದ್ದೇವೆ ಎಂದ ಸಚಿವರು, 2025-26ನೇ ಸಾಲಿನಲ್ಲಿ ಈಗಾಗಲೇ ಕಾರ್ಯಾಚರಣೆಯಲ್ಲಿರುವ 309 ಕೆಪಿಎಸ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ತರಗತಿವರೆಗೆ ಒಟ್ಟು 2,72,464 ವಿದ್ಯಾರ್ಥಿಗಳು ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಕೆಪಿಎಸ್ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಶಿಕ್ಷಕರ ಕೋರಿಕೆ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಪರಿಪೂರ್ಣವಾಗಿ ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆ ಪ್ರಕ್ರಿಯೆಯನ್ನು ತರ್ಕಬದ್ಧಗೊಳಿಸುವ ಮೂಲಕ ಕೆಪಿಎಸ್ ಶಾಲೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.



error: Content is protected !!