ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಐವರು ಹೊಸ ನ್ಯಾಯಾಧೀಶರಿಗೆ ಇಂದು (ಸೋಮವಾರ) ಪ್ರಮಾಣ ವಚನ ಬೋಧಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್ಗೆ ಐವರು ಹೊಸ ನ್ಯಾಯಾಧೀಶರನ್ನು ನೇಮಿಸುವ ಪತ್ರಕ್ಕೆ ಶನಿವಾರ ಸಹಿ ಹಾಕಿದ್ದರು.
ಇಂದು ಸುಪ್ರೀಂ ಕೋರ್ಟ್ನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ನೂತನ ನ್ಯಾಯಮೂರ್ತಿಗಳನ್ನು ಪದಗ್ರಹಣ ಮಾಡಲಾಯಿತು. ರಾಜಸ್ಥಾನ ಹೈಕೋರ್ಟ್ (ಎಚ್ಸಿ) ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿಥಾಲ್, ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್, ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್, ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕಳೆದ ವರ್ಷ ಡಿಸೆಂಬರ್ 13 ರಂದು ಸುಪ್ರೀಂ ಕೋರ್ಟ್ ಈ ಹೆಸರುಗಳನ್ನು ಉನ್ನತಿಗೆ ಶಿಫಾರಸು ಮಾಡಿತ್ತು. ಐದು ಹೊಸ ನ್ಯಾಯಾಧೀಶರ ಪ್ರಮಾಣ ವಚನ ಸ್ವೀಕಾರದೊಂದಿಗೆ, ಉನ್ನತ ನ್ಯಾಯಾಲಯದ ಬಲವು 27 ರಿಂದ 32 ಕ್ಕೆ ಏರಿಕೆಯಾಗಿದೆ. ಸುಪ್ರೀಂ ಕೋರ್ಟ್ 34 ನ್ಯಾಯಾಧೀಶರ ಬಲವನ್ನು ಹೊಂದಿದ್ದು, ಇನ್ನೂ ಎರಡು ಹುದ್ದೆ ಖಾಲಿ ಉಳಿದಿದೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಜನವರಿ 31 ರಂದು ಸುಪ್ರೀಂ ಕೋರ್ಟ್ಗೆ ಏರಿಸಲು ಇನ್ನಿಬ್ಬರ ಹೆಸರನ್ನು ಶಿಫಾರಸು ಮಾಡಿದೆ. ಈ ಎರಡು ಹೆಸರುಗಳು ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೆಸರನ್ನು ಸೂಚಿಸಲಾಗಿದೆ.