ಹೊಸದಿಗಂತ ವರದಿ ಅಂಕೋಲಾ:
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಫೆಬ್ರವರಿ 7 ರಂದು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಲಿದ್ದು ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಪಕ್ಷದ ಸಂಘಟನೆಗೆ ರಾಜ್ಯಾಧ್ಯಕ್ಷರ ಭೇಟಿ ಹೆಚ್ಚಿನ ಬಲ ಒದಗಿಸಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಫೆಬ್ರವರಿ 7 ರಂದು ಬೆಳಿಗ್ಗೆ 10 ಗಂಟೆಗೆ ಭಟ್ಕಳ ತಲುಪಲಿರುವ ನಳೀನ್ ಕುಮಾರ್ ಕಟೀಲ್ ಶಿರಾಲಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 3 ಘಂಟೆಗೆ ಕಾರವಾರಕ್ಕೆ ಆಗಮಿಸಲಿರುವ ಕಟೀಲ್ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ
ಭಾಗಿಯಾಗಲಿದ್ದಾರೆ. ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕ ರಾಜ್ಯಾಧ್ಯಕ್ಷರ ಭೇಟಿ ಕುರಿತು ಉತ್ಸುಕರಾಗಿದ್ದು ಎರಡೂ ಕಡೆ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಎಲ್ಲಾ ಪ್ರಮುಖ ಬಿಜೆಪಿ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಇನ್ನು ಕಾರವಾರ ಅಂಕೋಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕಿ ರೂಪಾಲಿ ನಾಯ್ಕ ಈ ಬಾರಿಯೂ ಟಿಕೆಟ್ ಪಡೆಯುವ ಸಾಧ್ಯತೆ ಹೆಚ್ಚಿದ್ದು ಕಾರವಾರದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕಾರವಾರ ಸೇರಿದಂತೆ ಜಿಲ್ಲೆಯ ಕೆಲವು ಅಭ್ಯರ್ಥಿಗಳ ಕುರಿತು ರಾಜ್ಯಾಧ್ಯಕ್ಷರಿಂದ ಕೆಲವು ಮಹತ್ವಪೂರ್ಣ ಸೂಚನೆಗಳು ದೊರಕುವ ನಿರೀಕ್ಷೆಯಿದೆ.
ಇತ್ತೀಚೆಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಅಂಕೋಲಾದಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಸಿ ಪಕ್ಷದ ಸಂಘಟನೆ ಕುರಿತಂತೆ ಮಹತ್ವಪೂರ್ಣ ವಿಚಾರಗಳನ್ನು ನೇರವಾಗಿ ತಿಳಿಸಿ ಪಕ್ಷದ ತತ್ವ, ಸಿದ್ಧಾಂತ, ಶಿಸ್ತಿನ ಕುರಿತು ಮನವರಿಕೆ ಮಾಡಿ ಹೋಗಿದ್ದು ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಟೀಲ್ ಅವರ ಆಗಮನ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮುಂಬರುವ ಚುನಾವಣೆ ದೃಷ್ಟಿಯಿಂದ ಹೆಚ್ಚಿನ ಹುರುಪು ಉತ್ಸಾಹ ತುಂಬಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.