ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಒಂದೇ ಸೂರಿನಡಿ ಎಲ್ಲಾ ರೀತಿಯ ಆರೋಗ್ಯ ಸೇವೆಗಳು ಸೇರಿದಂತೆ ಬಡವರ, ಮಧ್ಯಮ ವರ್ಗದವರ ಮತ್ತು ಕೊಳಚೆ ಪ್ರದೇಶ ನಿವಾಸಿಗಳ ಸಂಜೀವಿನಿಯಾಗಿ ನಮ್ಮ ಕ್ಲಿನಿಕ್ ಗಳು ಕಾರ್ಯನಿರ್ವಹಿಸಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ಬಿಬಿಎಂಪಿ ವ್ಯಾಪ್ತಿಯ ನಮ್ಮ ಕ್ಲಿನಿಕ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಚಿವರು, ಆರೋಗ್ಯ ಸೇವೆಗಳಿಗೆ ದೊಡ್ಡ ಮಹತ್ವ ನೀಡುತ್ತಿರುವ ಸಿಎಂ ಬೊಮ್ಮಾಯಿ ಅವರಿಗೆ ಅಭಿನಂದಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ನಮ್ಮ ಕ್ಲಿನಿಕ್ ಗಳು ಕಾರ್ಯಾರಂಭ ಮಾಡಲಿದ್ದು , ಸದ್ಯ 108 ಕ್ಲಿನಿಕ್ ಗಳು ಉದ್ಘಾಟನೆಯಾಗಿದೆ. ಇನ್ನು ಎರಡು ವಾರಗಳಲ್ಲಿ ಉಳಿದ ನಮ್ಮ ಕ್ಲಿನಿಕೆ ಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ನಮ್ಮ ಕ್ಲಿನಿಕ್ ಗಳು ನಗರ ಪ್ರದೇಶದ ಬಡವರಿಗೆ, ಕೂಲಿ, ಕಾರ್ಮಿಕರಿಗೆ, ಕೊಳಚೆ ಪ್ರದೇಶ ನಿವಾಸಿಗಳ ಜನರ ಆರೋಗ್ಯಕ್ಕೆ ಸಂಬಂಧಿಸಿದ ಹಲವು ರೀತಿಯ ಚಿಕಿತ್ಸೆಗಳನ್ನು ನೀಡಲಿದೆ. ಈ ಹಿಂದೆ ನಗರ ಪ್ರದೇಶದ 50-60 ಸಾವಿರ ಜನರಿಗೆ 1 ಚಿಕಿತ್ಸಾ ಕೇಂದ್ರವಿತ್ತು. ನಾವು ಈಗ ಅದನ್ನು 15-20 ಸಾವಿರ ಜನಸಂಖ್ಯೆಗೆ ಒಂದು ನಮ್ಮ ಕ್ಲಿನಿಕ್ ಸಿದ್ದವಾಗಿದೆ. ಕೆಲವೇ ದಿನಗಳಿಗೆ ಮಹಿಳೆಯರಿಗೆ ಆಯುಷ್ಮತಿ ಕ್ಲಿನಿಕ್ ಕೂಡ ಕಾರ್ಯಾರಂಭ ಮಾಡಲಿದೆ ಎಂದು ಘೋಷಿಸಿದರು.