ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನ್ನಭಾಗ್ಯದ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ. ವಿದೇಶಕ್ಕೂ ರಫ್ತಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಜಟಾಪಟಿ ನಡೆದಿದೆ.
ವಿಧಾನಪರಿಷತ್ ಕಲಾಪದಲ್ಲಿ ಮೊದಲ ದಿನವೇ ಅನ್ನಭಾಗ್ಯ ಅಕ್ಕಿ ವಿಚಾರದಲ್ಲಿ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರ ನಡೆಯಿತು. ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ವಿಚಾರವನ್ನು ಕಲಾಪದ ವೇಳೆ ಎಂಎಲ್ ಸಿ ಸಿ.ಟಿ ರವಿ ಪ್ರಸ್ತಾಪಿಸಿದರು.
ಬಡವರಿಗೆಂದು ಕೊಡಲ್ಪಡುವ ಅಕ್ಕಿ ಬಡವರ ಮನೆ ತಲುಪುತ್ತಿಲ್ಲ. ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟದ ಕುರಿತು ಎಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ? ಅಕ್ರಮಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಅನ್ನಭಾಗ್ಯ ಅಕ್ರಮ ಸಾಗಾಟದ ಆಳ-ಅಗಲ ಬಹಳಷ್ಟು ವಿಸ್ತಾರ ಆಗಿದೆ. ಇದರ ಸಮಗ್ರ ತನಿಖೆಗೆ ಎಸ್‌ಐಟಿ ತನಿಖೆಯ ಅಗತ್ಯ ಇದೆ ಎಂದು ಹೇಳಿದರು.
ಇದೇ ಅಕ್ಕಿಯನ್ನು ಪಾಲಿಶ್ ಮಾಡಿ 25 ಕೆ.ಜಿ.ಗೆ 8,000 ರೂಪಾಯಿಗೆ ಮಾರಾಟ ಮಾಡುತ್ತಾರಂತೆ. ದುಬೈನಲ್ಲಿ 10 ಕೆ.ಜಿ. ಅಕ್ಕಿಯನ್ನು 15,500 ರೂಪಾಯಿಗೆ ಮಾರಾಟ ಮಾಡುತ್ತರಂತೆ. ಅಂದರೆ, ಕೆ.ಜಿ.ಗೆ 150 ರೂಪಾಯಿ ಪಡೆಯುತ್ತಾರೆ. ಅನ್ನಭಾಗ್ಯ ಅಂತಾ ಕೊಡುತ್ತಿರುವ ಅಕ್ಕಿ ಬಡವರಿಗೆ ತಲುಪುತ್ತಿಲ್ಲ ಅಥವಾ ಬಡವರಿಗೆ ಬೇಕಾಗಿಲ್ಲ. ಇದರಲ್ಲಿ ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂದು ನೀವೇ ಹೇಳಿದ್ದೀರಿ ಗೋದಾಮಿಗೆ ಬರುವುದಕ್ಕಿಂತ ಮುಂಚೆಯೇ ಕ್ವಿಂಟಾಲ್‌ಗಟ್ಟಲೇ ಅಕ್ಕಿ ಮಾಯವಾಗಿದೆ ಎಂದು ನೀವೇ ಉತ್ತರದಲ್ಲೇ ಕೊಟ್ಟಿದ್ದೀರಿ ಎಂದಿದ್ದಾರೆ.

