Wednesday, December 10, 2025

ಟಿ20 ವಿಶ್ವಕಪ್ ಗೂ ಮುನ್ನ ICCಗೆ ಹೊಸ ತಲೆನೋವು: ಒಪ್ಪಂದದಿಂದ ಹಿಂದೆ ಸರಿದ ಜಿಯೋ ಹಾಟ್‌ಸ್ಟಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಆರಂಭಕ್ಕೆ ಇನ್ನೇನು ಕೆಲ ತಿಂಗಳುಗಳು ಮಾತ್ರ ಬಾಕಿಯಿರುವ ಈ ಹೊತ್ತಿನಲ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಪ್ರತೀಕ್ಷಿತ ಸಮಸ್ಯೆಯನ್ನು ಎದುರಿಸುತ್ತಿದೆ. ಭಾರತದಲ್ಲಿ ಐಸಿಸಿ ಟೂರ್ನಿಗಳ ಪ್ರಸಾರ ನಡೆಸುತ್ತಿದ್ದ ಪ್ರಮುಖ ಡಿಜಿಟಲ್ ವೇದಿಕೆ ಜಿಯೋ ಹಾಟ್‌ಸ್ಟಾರ್ ಭಾರೀ ಆರ್ಥಿಕ ಒತ್ತಡದ ಹಿನ್ನೆಲೆಯಲ್ಲಿ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.

ರಿಲಯನ್ಸ್ ಒಡೆತನದ ಜಿಯೋ ಹಾಟ್‌ಸ್ಟಾರ್ ಕಳೆದ ವರ್ಷ ಐಸಿಸಿಯೊಂದಿಗೆ 2024ರಿಂದ 2027ರ ಅವಧಿಗೆ ಪ್ರಸಾರ ಹಕ್ಕು ಪಡೆದುಕೊಳ್ಳುವ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಮೊತ್ತ ಸುಮಾರು ₹27,047 ಕೋಟಿ ಎಂದು ತಿಳಿದುಬಂದಿತ್ತು. ಆದರೆ ಟಿ20 ವಿಶ್ವಕಪ್ 2024 ಮತ್ತು ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಗಳಿಂದ ನಿರೀಕ್ಷಿತ ಆದಾಯ ಲಭಿಸದೇ, ಸಂಸ್ಥೆಗೆ ಭಾರೀ ನಷ್ಟ ಉಂಟಾಗಿದೆ ಎಂಬ ಅಂದಾಜುಗಳು ಹೊರಬಿದ್ದಿವೆ. ಒಂದೇ ವರ್ಷದೊಳಗೆ ನಷ್ಟದ ಪ್ರಮಾಣ ₹25 ಸಾವಿರ ಕೋಟಿ ಮೀರಿದೆ ಎನ್ನಲಾಗುತ್ತಿದೆ.

ಇದೀಗ ಜಿಯೋ ಹಾಟ್‌ಸ್ಟಾರ್ ಪ್ರಸಾರ ಹಕ್ಕನ್ನು ತ್ಯಜಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಐಸಿಸಿ ತ್ವರಿತವಾಗಿ ಹೊಸ ಪ್ರಸಾರ ಪಾಲುದಾರರ ಹುಡುಕಾಟಕ್ಕೆ ಮುಂದಾಗಿದೆ. 2026ರಿಂದ 2029ರ ಅವಧಿಗೆ ಭಾರತದಲ್ಲಿ ಮಾಧ್ಯಮ ಹಕ್ಕುಗಳನ್ನು ನೀಡಲು ಐಸಿಸಿ ಚಿಂತನೆ ನಡೆಸುತ್ತಿದೆ. ಸೋನಿ ಫಿಕ್ಚರ್ಸ್, ಅಮೆಜಾನ್ ಪ್ರೈಮ್ ವೀಡಿಯೊ, ನೆಟ್‌ಫ್ಲಿಕ್ಸ್ ಸೇರಿದಂತೆ ಪ್ರಮುಖ ಡಿಜಿಟಲ್ ವೇದಿಕೆಗಳತ್ತ ಗಮನ ಹರಿಸಲಾಗಿದೆಯಾದರೂ, ಒಪ್ಪಂದದ ಮೊತ್ತ ದೊಡ್ಡದಾಗಿರುವುದರಿಂದ ಸ್ಪಷ್ಟ ಆಸಕ್ತಿ ಇನ್ನೂ ವ್ಯಕ್ತವಾಗಿಲ್ಲ.

error: Content is protected !!