ಹಳೆ ಮೈಸೂರು ಗೆಲ್ಲೋಕೆ ವಿಜಯೇಂದ್ರ ಉತ್ಸಾಹ: ಫೆ.20ರಂದು ಯುವ ಮೋರ್ಚಾ ಸಮಾವೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಫೆ. 20ರಂದು ಯುವ ಮೋರ್ಚಾದ ಮೊದಲ ಸಮಾವೇಶವು ಮಂಡ್ಯ ನಗರದಲ್ಲಿ ನಡೆಯಲಿದೆ ಎಂದು ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯ ʻಜಗನ್ನಾಥ ಭವನʼದಲ್ಲಿ ಇಂದು ಬಿಜೆಪಿ ವಿವಿಧ ಮೋರ್ಚಾಗಳ ಸಮಾವೇಶಗಳ ಸಂಚಾಲಕ ಬಿ.ವೈ.ವಿಜಯೇಂದ್ರ ತಿಳಿಸಿದರು.

ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಉಪ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಪಕ್ಷಕ್ಕೆ ಐತಿಹಾಸಿಕ ಗೆಲುವು ಲಭಿಸಿತ್ತು. ಇದೀಗ ಬಿಜೆಪಿ ಹಳೆ ಮೈಸೂರು ಭಾಗಕ್ಕೆ ಪಕ್ಷ ಒತ್ತು ಕೊಡುತ್ತಿದೆ. ಈ ಸಮಾವೇಶಕ್ಕೆ ಕೇಂದ್ರದ ನಾಯಕರು ಬರುವ ನಿರೀಕ್ಷೆ ಇದೆ ಎಂದರು. ಕೇಂದ್ರ ನಾಯಕ ಅಮಿತ್ ಶಾ ಅವರು ಈಗಾಗಲೇ ಮಂಡ್ಯ ಭಾಗಕ್ಕೆ ಬಂದು ಹೋಗಿರುವುದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ ಎಂದು ವಿವರಿಸಿದರು.

ಬಿಜೆಪಿ ಹಳೆ ಮೈಸೂರು ಭಾಗಕ್ಕೆ ಒತ್ತು ಕೊಟ್ಟಿದ್ದು, 150 ಶಾಸಕ ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿದೆ ಎಂದರು. 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ವಿವಿಧ ಮೋರ್ಚಾಗಳ ಸಮಾವೇಶ ನಡೆಸಲಾಗುತ್ತಿದೆ.  ಮೋರ್ಚಾಗಳು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೇಂದ್ರ- ರಾಜ್ಯಗಳ ಸಾಧನೆಯನ್ನು ಮನೆಮನೆಗೆ ತಲುಪಿಸುವ ಕೆಲಸ ನಡೆಯಲಿದೆ. ಐತಿಹಾಸಿಕ ಗೆಲುವು ಬಿಜೆಪಿಯದ್ದಾಗಲು ನಮ್ಮೆಲ್ಲ ಮೋರ್ಚಾಗಳು ಸಕ್ರಿಯವಾಗಿ ಕೆಲಸ ಮಾಡಬೇಕು.

50 ಲಕ್ಷ ಮತದಾರರ ಸದಸ್ಯತ್ವ ನೋಂದಣಿ

ಸಮಾವೇಶಗಳ ಮೂಲಕ 2 ಕೋಟಿ ಮತದಾರರನ್ನು ತಲುಪುವುದು, 50 ಲಕ್ಷ ಹೊಸ ಮತದಾರರನ್ನು ಸದಸ್ಯರನ್ನಾಗಿ ನೋಂದಣಿ ಮಾಡುವ ಗುರಿ ಇದೆ. ಪಕ್ಷದಲ್ಲಿರುವ ಯುವ ಮೋರ್ಚಾ, ಎಸ್ಸಿ ಮೋರ್ಚಾ, ಎಸ್ಟಿ ಮೋರ್ಚಾ, ಒಬಿಸಿ ಮೋರ್ಚಾ, ಮಹಿಳಾ ಮೋರ್ಚಾ, ರೈತ ಮೋರ್ಚಾ ಮತ್ತು ಅಲ್ಪಸಂಖ್ಯಾತ ಮೋರ್ಚಾಗಳನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿವೆ. ಈ ಸಂದರ್ಭದಲ್ಲಿ ಪ್ರಧಾನಿಯವರ ಅಮೃತ್ ಕಾಲ್ ಯೋಜನೆಯನ್ನು ಸಾಕಾರಗೊಳಿಸಲು ಹಾಗೂ ದೇಶ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಳ್ಳಲು ಬಯಸುವ ಯುವಜನತೆಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ತೀರ್ಮಾನಿಸಿದ್ದೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!