ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಲಬುರುಗಿಯಲ್ಲಿ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಸೇಡಂ ರಸ್ತೆಯ ಬ್ರಹ್ಮಕುಮಾರಿ ಆಶ್ರಮ ಅಮೃತ ಸರೋವರದಲ್ಲಿ ಕಡ್ಲೆಕಾಯಿಯಲ್ಲಿ ಅರಳಿದ ಬೃಹದಾಕಾರದ ಶಿವಲಿಂಗ ಈ ಬಾರಿ ಅತ್ಯಾಕರ್ಷಕವಾಗಿ ಕಣ್ಮನ ಸಳೆಯುತ್ತಿದೆ. ಜನತೆಯು ಕಡ್ಲೆಕಾಯಿ ಶಿವಲಿಂಗವನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ಬ್ರಹ್ಮಕುಮಾರಿ ಆಶ್ರಮದ ಅಮೃತ ಸರೋವರದಲ್ಲಿ ಪ್ರತಿ ಶಿವರಾತ್ರಿ ಹಲವು ವೈಶಿಷ್ಟತೆಗಳಿಂದ ಶಿವನ ಆರಾಧನೆ ಮಾಡಲಾಗುತ್ತದೆ. ಪ್ರತಿ ಬಾರಿ ವಿಭಿನ್ನವಾಗಿ ಬೃಹತ್ ಆಕಾರದ ಶಿವಲಿಂಗ ತಯಾರಿಸುವ ಮೂಲಕ ಗಮನ ಸೆಳೆಯುತ್ತಾರೆ. ಈ ಬಾರಿ ಕಡ್ಲೆಕಾಯಿಯಲ್ಲಿ 25 ಅಡಿ ಎತ್ತರದ ಶಿವಲಿಂಗ ತಲೆ ಎತ್ತಿದೆ.
ಉತ್ತರ ಕರ್ನಾಟಕದಲ್ಲಿ ಶೇಂಗಾ ಕಾಯಿ ಎಂದು ಕರೆಯಲಾಗುವ ಕಡ್ಲೆಕಾಯಿ ಈ ಭಾಗದ ರೈತರು ಬೆಳೆಯುವ ಪ್ರಮುಖ ಬೆಳೆಯಲ್ಲೊಂದು. ಹೀಗಾಗಿ ಬರೋಬ್ಬರಿ 8 ಕ್ವಿಂಟಾಲ್ ಶೇಂಗಾ ಕಾಯಿ ಬಳಕೆ ಮಾಡಿ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಸ್ವತಃ ಆಶ್ರಮ ವಾಸಿಗಳೇ ಶೇಂಗಾ ಕಾಯಿಯ ಆಕರ್ಷಕ ಶಿವಲಿಂಗ ನಿರ್ಮಿಸಿದ್ದಾರೆ ಅನ್ನೋದು ಮತ್ತೊಂದು ಗಮನಾರ್ಹ ವಿಷಯ. ಶೇಂಗಾ ಕಾಯಿಗಳಿಗೆ ಬಣ್ಣಗಳನ್ನು ಸೇರಿಸಿ ಜತೆಗೆ ಅರಶಿಣ, ಕುಂಕುಮ ಮಿಶ್ರಿತವಾಗಿ ಶಿವಲಿಂಗವನ್ನು ಅಲಂಕಾರ ಮಾಡಲಾಗಿದ್ದು ನೋಡುಗರಿಗೆ ಭಕ್ತಿ-ಭಾವ ಉಕ್ಕಿಸುವಂತಿದೆ.
ಇನ್ನು ಕಡ್ಲೆಕಾಯಿ ಶಿವಲಿಂಗವನ್ನು ಫೆ.18 ರಿಂದ ಹತ್ತು ದಿನಗಳ ಕಾಲ ಭಕ್ತರ ದರುಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಒಂದೆಡೆ ಬೃಹದಾಕಾರದ ಶಿವಲಿಂಗ, ಇನ್ನೊಂದಡೆ ಜ್ಯೋತಿರ್ಲಿಂಗ ದರುಶನಕ್ಕೆ ಜನೋಸ್ತಮವೇ ಹರಿದು ಬರುತ್ತಿದೆ.