ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕರ್ನಾಟಕದ ಶಾಸಕರು ಬೆಂಗಳೂರಿಗೆ ಬಂದು ಭಿಕ್ಷುಕರ ತರ ಭಿಕ್ಷೆ ಬೇಡಬೇಕು. ಕೊನೆಗೆ ಹತ್ತು, ಇಪ್ಪತ್ತು ಪೈಸೆ ಸಿಗುತ್ತದೆ ಎಂದು ಆಡಳಿತ ಪಕ್ಷದ ಶಾಸಕ ರಾಜು ಕಾಗೆ ಅಸಹಾಯಕತೆ ಹೊರಹಾಕಿದರು.
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಬಗ್ಗೆ ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ಉತ್ತರ ಕರ್ನಾಟಕದವರು ಇಲ್ಲಿಗೆ ಬಂದು ಕೈಮುಗಿದು ಎಲ್ಲರ ಮುಂದೆ ನಿಲ್ಲಬೇಕು. ನಾನು ಈ ಬಗ್ಗೆ ಧ್ವನಿ ಎತ್ತಿದ್ದೆ. ಆದರೆ ನಾನು ನನ್ನ ಪಕ್ಷದ ವಿರುದ್ಧ ಮಾತನಾಡಿದ್ದೆ ಎಂದು ಮಾಧ್ಯಮಗಳಲ್ಲಿ ಪ್ರಸಾರ ಆಗಿತ್ತು. ನಾನು ಸರ್ಕಾರದ ವಿರುದ್ಧ ಮಾತನಾಡಿಲ್ಲ. ಅಧಿಕಾರಿಗಳು ಪಾರದರ್ಶಕತೆಯಿಂದ ಕೆಲಸ ಮಾಡಬೇಕು ಎಂದಿದ್ದೆ ಎಂದು ವಿವರಿಸಿದರು.
ನಾನು ಪ್ರಧಾನಿ, ಸಿಎಂಗೆ ಪ್ರತ್ಯೇಕ ರಾಜ್ಯ ಮಾಡುವಂತೆ ಕೋರಿ ಪತ್ರ ಬರೆದಿದ್ದೆ. ಇದು ನನ್ನ ಅನಿಸಿಕೆ ಆಗಿತ್ತು. ಇದಕ್ಕೆ ಕೆಲವರು ಟೀಕೆ ಮಾಡಿದರು. ಇನ್ನೂ ಕೆಲ ಸಂಘ ಸಂಸ್ಥೆಗಳು ಅದನ್ನು ಬೆಂಬಲಿಸಿದವು. ಕಲ್ಯಾಣ ಕರ್ನಾಟಕದ 371ಜೆಯಿಂದ ನಮಗೆ ಏನೂ ಉಪಯೋಗ ಇಲ್ಲ. ಉತ್ತರ ಕರ್ನಾಟಕ ಭಾಗಕ್ಕೂ ಐದು ಸಾವಿರ ಕೋಟಿ ಕೊಡಿ ಎಂಬುದು ನನ್ನ ಮನವಿ. ಏಕೆಂದರೆ ನಮ್ಮ ಭಾಗವೂ ಹಿಂದುಳಿದಿದೆ. ನಮ್ಮಲ್ಲಿ ಅನೇಕರು ಇನ್ನೂ ಬೆಂಗಳೂರು ನೋಡಿಲ್ಲ. ಏಕೆಂದರೆ, ಸುಮಾರು 800 ಕಿ. ಮೀ. ದೂರ ಇದೆ ಎಂದರು.

