Friday, December 12, 2025

ನಿಮ್ಮ ರಾತ್ರಿ ಹೆದ್ದಾರಿ ಪ್ರಯಾಣ ಎಷ್ಟು ಸುರಕ್ಷಿತ? ಸರ್ಕಾರಿ ಅಂಕಿ-ಅಂಶಗಳಿಂದ ಸ್ಫೋಟಕ ಸತ್ಯ ಬಯಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾತ್ರಿ ವೇಳೆ ಹೆದ್ದಾರಿಗಳಲ್ಲಿ ಪ್ರಯಾಣಿಸುವುದು ಅತ್ಯಂತ ಸುರಕ್ಷಿತ ಎಂಬುದು ಅನೇಕರ ಸಾಮಾನ್ಯ ನಂಬಿಕೆ. ದಟ್ಟ ವಾಹನ ಸಂಚಾರದ ಕಿರಿಕಿರಿಯಿಲ್ಲದೆ, ಸರಾಗವಾಗಿ ಗಮ್ಯಸ್ಥಾನ ತಲುಪಬಹುದು ಎಂಬ ಲೆಕ್ಕಾಚಾರವೂ ಇದೆ. ಆದರೆ, ರಾಜ್ಯದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ರಾತ್ರಿ ಪ್ರಯಾಣ ಅತ್ಯಂತ ಅಪಾಯಕಾರಿ ಎಂದು ಸರ್ಕಾರದ ಅಧಿಕೃತ ಅಂಕಿ-ಅಂಶಗಳು ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿವೆ.

ರಾಜ್ಯ ಹೆದ್ದಾರಿಗಳಲ್ಲಿ ದರೋಡೆ ಮತ್ತು ಸುಲಿಗೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕೊಂಚ ಇಳಿಕೆಯಾಗಿದ್ದರೂ, ಒಟ್ಟು ಸಂಖ್ಯೆ ಮಾತ್ರ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 403 ದರೋಡೆ ಮತ್ತು ಸುಲಿಗೆ ಪ್ರಕರಣಗಳು ವರದಿಯಾಗಿವೆ. ಇದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.

ಹೆದ್ದಾರಿ ದರೋಡೆಗಳನ್ನು ನಿಯಂತ್ರಿಸಲು ರಾಜ್ಯ ಪೊಲೀಸ್ ಇಲಾಖೆಯು ವಿವಿಧ ಕ್ರಮಗಳನ್ನು ಕೈಗೊಂಡಿದೆ:

ಚೆಕ್ ಪೋಸ್ಟ್‌ಗಳ ನಿರ್ಮಾಣ: ಪೊಲೀಸ್ ಠಾಣಾ ಸರಹದ್ದಿನಲ್ಲಿ ಹಾದುಹೋಗುವ ಹೆದ್ದಾರಿಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ, ಸಂಶಯಾಸ್ಪದ ವ್ಯಕ್ತಿಗಳು ಮತ್ತು ವಾಹನಗಳ ತಪಾಸಣೆ ಕೈಗೊಳ್ಳಲಾಗುತ್ತಿದೆ.

ರಾತ್ರಿ ಗಸ್ತು ಹೆಚ್ಚಳ: ಪ್ರತಿಯೊಂದು ಠಾಣೆಗೂ ಸರ್ಕಾರಿ ದ್ವಿಚಕ್ರ ವಾಹನಗಳನ್ನು ಹಂಚಿಕೆ ಮಾಡಿ, ರಾತ್ರಿ ಗಸ್ತು ಹೆಚ್ಚಿಸಲಾಗಿದೆ. ಗಸ್ತು ವಾಹನಗಳು ಕಡ್ಡಾಯವಾಗಿ ಸೈರನ್ ಮತ್ತು ರೆಡ್ ಲೈಟ್‌ಗಳನ್ನು ಆನ್ ಮಾಡಿಕೊಂಡು ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.

24/7 ಗಸ್ತು: ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ‘112’ ಗಸ್ತು ನಿಯೋಜಿಸಲಾಗಿದೆ.

ಹಳೆಯ ಅಪರಾಧಿಗಳ ಮೇಲೆ ನಿಗಾ: ಈ ಹಿಂದೆ ದರೋಡೆ, ಸುಲಿಗೆ ಮತ್ತು ಇತರ ಸ್ವತ್ತಿನ ಅಪರಾಧಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ ಮೇಲೆ ಅನಿರೀಕ್ಷಿತ ತಪಾಸಣೆ ಮತ್ತು ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ.

ಮಾಹಿತಿ ಹಂಚಿಕೆ: ದರೋಡೆ ಪ್ರಕರಣಗಳಲ್ಲಿ ಭಾಗಿಯಾದವರ ಮಾಹಿತಿಯನ್ನು ನೆರೆಯ ರಾಜ್ಯ/ಜಿಲ್ಲೆಗಳು/ಪೊಲೀಸ್ ಠಾಣೆಗಳೊಂದಿಗೆ ಪರಸ್ಪರ ಹಂಚಿಕೊಳ್ಳಲಾಗುತ್ತಿದೆ.

ಸಿಸಿಟಿವಿ ಪರಿಶೀಲನೆ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಟೋಲ್‌ಗಳಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಗಳನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತಿದೆ.

ಆಯುಧಗಳ ಕಡ್ಡಾಯ ಬಳಕೆ: ರಾತ್ರಿ ಬೀಟ್ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಆಯುಧ ಮತ್ತು ಮದ್ದುಗುಂಡುಗಳನ್ನು ತೆಗೆದುಕೊಂಡು ಹೋಗಲು ಸೂಚಿಸಲಾಗಿದೆ.

ಪೊಲೀಸರ ಈ ಕಟ್ಟುನಿಟ್ಟಿನ ಕ್ರಮಗಳ ಹೊರತಾಗಿಯೂ, ಹೆದ್ದಾರಿಗಳಲ್ಲಿ ನಡೆಯುತ್ತಿರುವ ದರೋಡೆ ಮತ್ತು ಸುಲಿಗೆ ಪ್ರಕರಣಗಳು ರಾತ್ರಿ ಪ್ರಯಾಣದ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

error: Content is protected !!