ಹೊಸ ದಿಗಂತ ವರದಿ, ಕಲಬುರಗಿ:
ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಮುಹೂರ್ತ ನಿಗದಿಯಾಗಿದ್ದು,ಮಾ-23 ರಂದು ಚುನಾವಣೆ ನಡೆಯಲಿದ್ದು, ಈ ಬಗ್ಗೆ ಪಾಲಿಕೆ ಚುನಾವಣೆ ಅಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಅಧಿಸೂಚನೆ ಹೊಡಿಸಿದ್ದಾರೆ.
ಈ ಹಿಂದೆ 2021ರಲ್ಲಿ ಚುನಾವಣೆ
ಕಲಬುರಗಿ ಮಹಾನಗರ ಪಾಲಿಕೆಗೆ 2021ರ ಸೆಪ್ಟೆಂಬರ್ನಲ್ಲಿ ಚುನಾವಣೆ ನಡೆದಿತ್ತು. ಹೊರಗಿನ ಜಿಲ್ಲೆಯವರಿಗೆ ಮತದಾನದ ಅಧಿಕಾರ ನೀಡಿರುವುದು ಮತ್ತು ಮೀಸಲಾತಿ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರಿಂದ ವಿಳಂಬವಾಗಿತ್ತು. ವಿಧಾನಸಭೆ ಚುನಾವಣೆ ಅಧಿಸೂಚನೆಗೂ ಮುನ್ನವೆ ಮೇಯರ್ ಚುನಾವಣೆಗೆ ದಿನಾಂಕ ನಿಗದಿಪಡಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಕಾಂಗ್ರೆಸ್ ಅರ್ಜಿ ವಜಾ
ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ
ನಾಮನಿರ್ದೇಶಿತ ಸದಸ್ಯರಿಗೆ ಮತದಾನಕ್ಕೆ ಅವಕಾಶ ನೀಡದಂತೆ ಕಾಂಗ್ರೆಸ್ ನಿಂದ ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಲಾಗಿದೆ.
ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್, ಚುನಾವಣೆಗೆ ಮಧ್ಯಂತರ ತಡೆಯಾಜ್ಞೆ ನೀಡದೆ, ಅರ್ಜಿಯನ್ನು ವಜಾಗೊಳಿಸಿದೆ. ಆ ಮೂಲಕ ಚುನಾವಣಾ ಅಧಿಕಾರಿಗಳ ಅಧಿಸೂಚನೆಯಂತೆ ಮಾ.23ಕ್ಕೆ ಮೇಯರ್, ಉಪಮೇಯರ್ ಆಯ್ಕೆ ಚುನಾವಣೆ ನಡೆಯುವುದು ಖಚಿತವಾಗಿದೆ.
ಇನ್ನೂ 55 ಸದಸ್ಯರ ಬಲ ಹೊಂದಿರುವ ಪಾಲಿಕೆ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಎಸ್ಸಿ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸಾಮಾನ್ಯ ವಗ೯ ಮೀಸಲಾತಿ ನಿಗದಿಯಾಗಿದೆ.