ವಿವಿಧ ಭಾಗ್ಯಗಳ ಸಿದ್ದರಾಮಯ್ಯಗೆ ಕ್ಷೇತ್ರ ಭಾಗ್ಯವೇ ಇಲ್ಲ: ಪ್ರತಾಪ್ ಸಿಂಹ ಲೇವಡಿ

ಹೊಸದಿಗಂತ ವರದಿ ಮಡಿಕೇರಿ:

ತಮ್ಮ ಅಧಿಕಾರದ ಅವಧಿಯಲ್ಲಿ ವಿವಿಧ ಭಾಗ್ಯಗಳನ್ನು ನೀಡಿದ್ದೇನೆ ಎನ್ನುವ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಗೆ, ಚುನಾವಣಾ ಹೊಸ್ತಿಲಲ್ಲಿ ಇರುವಾಗ ‘ಕ್ಷೇತ್ರ ಭಾಗ್ಯ’ವೇ ಇಲ್ಲದಂತಾಗಿದೆ ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ ಸಿಂಹ ಲೇವಡಿ ಮಾಡಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎನ್ನುವ ದಯನೀಯ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರಿದ್ದಾರೆ. ಅವರು ನೀಡಿರುವ ವಿವಿಧ ಭಾಗ್ಯಗಳಿಗೆ ಜನ ಬೆಲೆ ನೀಡಿಲ್ಲ ಮತ್ತು ಅವರ ಬಗ್ಗೆ ವಿಶ್ವಾಸವೂ ಜನರಿಗಿಲ್ಲವೆಂದು ಟೀಕಿಸಿದರು.

ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ ಅವರು ಕೊನೆಗೆ ‘ವರುಣಾ ಕ್ಷೇತ್ರ’ಕ್ಕೆ ಬರಲಿದ್ದಾರೆ. ಜನತೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್’ನ ಭರವಸೆಗಳನ್ನು ನಂಬಿ ಮರುಳಾಗಬೇಡಿ. ಇದು ಟೋಪಿ ಹಾಕುವ ಕಾರ್ಯಕ್ರಮ ಎಂದು ಆರೋಪಿಸಿದರು. ಚುನಾವಣಾ ಹಂತದಲ್ಲಿ ಉಚಿತವಾಗಿ ಏನನ್ನೇ ಕೊಡುತ್ತೇವೆ ಎಂದರೂ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಬಿಜೆಪಿಯನ್ನೂ ನಂಬಬೇಡಿ ಎಂದು ಖಡಕ್ ಆಗಿ ನುಡಿದ ಪ್ರತಾಪ ಸಿಂಹ, ಪಂಜಾಬ್‍ನಲ್ಲಿ ಎಎಪಿ ಪಕ್ಷ ಅಲ್ಲಿನ ಜನತೆಗೆ ಟೋಪಿ ಹಾಕಿದೆ. ರಾಜ್ಯದಲ್ಲೂ ಆ ಪಕ್ಷ ಟೋಪಿ ಹಾಕುವ ಕೆಲಸ ಮಾಡುತ್ತದೆ. ಅದನ್ನೂ ನಂಬಬೇಡಿ ಎಂದು ನುಡಿದರು.

ಯುಗಾದಿಯಂದು ಕಾಂಗ್ರೆಸ್‍ನಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬೇಕಿತ್ತು, ಆದರೆ ಆಗಿಲ್ಲ. ಪ್ರಸ್ತುತ ಸಿದ್ದರಾಮಯ್ಯ ಅವರಿಗೆ ಸ್ಪರ್ಧೆಗೆ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಚಿಂತೆಯಾದರೆ, ಅವರ ಪತ್ನಿಗೆ ಮಗನ ರಾಜಕೀಯ ಭವಿಷ್ಯದ ಬಗ್ಗೆ ಚಿಂತೆ ಇದೆ. ಜೆಡಿಎಸ್‍ನ ರೇವಣ್ಣರಿಗೆ ಭವಾನಿ ಅವರ ಚಿಂತೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಿಖಿಲ್ ಚಿಂತೆಯಾಗಿದೆ. ಕೇವಲ ಕುಟುಂಬದ ಬಗ್ಗೆಯಷ್ಟೇ ಚಿಂತನೆ ನಡೆಸುವ ಇವರಿಗೆ ರಾಜ್ಯದ ಜನತೆಯ ಬಗ್ಗೆ ಕಿಂಚಿತ್ ಕಾಳಜಿಯೂ ಇಲ್ಲವೆಂದು ಪ್ರತಾಪ್ ಸಿಂಹ ಟೀಕಾ ಪ್ರಹಾರ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!