ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರವು ವ್ಯಾಪಕವಾಗಿ ಡಿಜಿಟಲೀಕರಣಗೊಂಡಿದ್ದು ಜನರೆಲ್ಲ ಕ್ಯಾಶ್‌ಲೆಸ್ ವ್ಯವಸ್ಥೆಯನ್ನು ಹೆಚ್ಚೆಚ್ಚು ಬಳಸುತ್ತಿದ್ದಾರೆ. ಅದರಲ್ಲೂ ಯುಪಿಐ ನಂತಹ ಕ್ರಾಂತಿಕಾರಕ ಬದಲಾವಣೆ ನಗದು ಅವಶ್ಯಕತೆಯನ್ನು ಕಡಿಮೆ ಮಾಡಿದೆ. ಆದರೂ ಇನ್ನೂ ನಗದು ವ್ಯವಹಾರಗಳನ್ನೇ ನೆಚ್ಚಿಕೊಂಡಿರುವವರು ಬಹಳಷ್ಟು ಮಂದಿಯಿದ್ದಾರೆ. ನೀವು ಅಂಥವರಲ್ಲೊಬ್ಬರಾಗಿದ್ದಾರೆ ಈ ವಿವರಣೆ ನಿಮಗಾಗಿ. ನಗದು ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ನಿಬಂಧನೆಯನ್ನು ಸರ್ಕಾರ ವಿಧಿಸಿದ್ದು ನೀವು ಈ ಅಂಶಗಳನ್ನು ತಿಳಿದಿರಲೇಬೇಕು.
– ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಮನೆಯಲ್ಲಿ ಹಣ ಸಂಗ್ರಹಿಸಿಟ್ಟುಕೊಳ್ಳಲು ಯಾವುದೇ ಅಡ್ಡಿ ಇಲ್ಲ. ಆದರೆ ಆ ಹಣಕ್ಕೆಲ್ಲ ಸೂಕ್ತ ದಾಖಲೆಯಿರಬೇಕು. ಆ ಹಣದ ಮೂಲ ಸರಿಯಾಗಿರಬೇಕು. ಆದಾಯ ತೆರಿಗೆ ದಾಳಿ ವೇಳೆ ಹಣದ ಮೂಲವನ್ನು ಹಾಜರುಪಡಿಸಬೇಕಾಗುತ್ತದೆ.
– ಹಣವು ಆದಾಯದಲ್ಲಿ ಲೆಕ್ಕವಿಲ್ಲದಂತೆ ಇರಬಾರದು. ನಿಮ್ಮ ದಾಖಲೆಗಳು ಮನೆಯಲ್ಲಿ ಇಟ್ಟಿರುವ ಹಣದ ಮೊತ್ತಕ್ಕೆ ಹೊಂದಿಕೆಯಾಗದಿದ್ದರೆ ಆದಾಯ ತೆರಿಗೆ ಅಧಿಕಾರಿಗಳು ನಿಮಗೆ ದಂಡ ವಿಧಿಸಬಹುದು. ಲೆಕ್ಕವಿಲ್ಲದ ಹಣವನ್ನು ಆದಾಯ ತೆರಿಗೆ ಸಿಬ್ಬಂದಿ ವಶಪಡಿಸಿಕೊಳ್ಳುತ್ತಾರೆ. ವಶಪಡಿಸಿಕೊಂಡ ಒಟ್ಟು ಹಣದ 137 ಶೇಕಡಾದವರೆಗೆ ದಂಡ ವಿಧಿಸಬಹುದಾದ ಅಧಿಕಾರ ಅವರಿಗಿರುತ್ತದೆ.
– ಯಾವುದೇ ವ್ಯಕ್ತಿಯು ಸಾಲ ಅಥವಾ ಠೇವಣಿ ಸಂದರ್ಭದಲ್ಲಿ 20 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ. ಸ್ಥಿರಾಸ್ತಿ ವರ್ಗಾವಣೆ ಸಂದರ್ಭದಲ್ಲಿಯೂ ಈ ನಿಯಮ ಅನ್ವಯವಾಗುತ್ತದೆ.
– ಹಣಕಾಸು ವರ್ಷವೊಂದರಲ್ಲಿ ದಾಖಲೆ ರಹಿತ ಅಥವಾ ಮೂಲದ ವಿವರಣೆ ಇಲ್ಲದ 20 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ವ್ಯವಹಾರವು ದಂಡವನ್ನು ಆಕರ್ಷಿಸಬಹುದು
– ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೇಶನ್ ಪ್ರಕಾರ, ಒಂದು ಬಾರಿಗೆ 50,000 ರೂ.ಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಠೇವಣಿ ಮಾಡಲು ಅಥವಾ ಹಿಂಪಡೆಯಲು ಪ್ಯಾನ್ ಕಾರ್ಡ್ ವಿವರಗಳನ್ನು ನೀಡಬೇಕಾಗುತ್ತದೆ
– ಖಾತೆದಾರರು ಒಂದು ವರ್ಷದಲ್ಲಿ 20 ಲಕ್ಷ ರೂಪಾಯಿಗಳನ್ನು ನಗದು ರೂಪದಲ್ಲಿ ಠೇವಣಿ ಮಾಡಿದರೆ ಅಂಥವರು ಪ್ಯಾನ್ ಕಾರ್ಡ್ ಮತ್ತು ಆಧಾರ್ ದಾಖಲೆ ತೋರಿಸಬೇಕಾಗುತ್ತದೆ
– ಆಸ್ತಿಗಳ ಖರೀದಿ ಅಥವಾ ಮಾರಾಟದ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯು 30 ಲಕ್ಷರೂಪಾಯಿಗಿಂತ ಹೆಚ್ಚಿನ ನಗದು ಬಳಸಿದರೆ ತನಿಖಾ ಸಂಸ್ಥೆಯ ಪರಿಶೀಲನೆಗೆ ಒಳಪಡಬೇಕಾಗುತ್ತದೆ
– ಕ್ರೆಡಿಟ್-ಡೆಬಿಟ್ ಕಾರ್ಡ್ ಪಾವತಿಯ ಸಮಯದಲ್ಲಿ, ಕಾರ್ಡ್ ಹೋಲ್ಡರ್ ಒಮ್ಮೆಗೆ ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ಪಾವತಿಸಿದರೆ ವ್ಯಕ್ತಿಯ ವಿರುದ್ಧ ತನಿಖೆ ನಡೆಸಬಹುದು.
– ಒಬ್ಬ ವ್ಯಕ್ತಿ ಒಂದೇ ದಿನದಲ್ಲಿ ಸಂಬಂಧಿಕರಿಂದ 2 ಲಕ್ಷ ರೂಪಾಯಿಗಳಷ್ಟನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ. ಆ ವ್ಯವಹಾರವನ್ನು ಬ್ಯಾಂಕ್ ಮೂಲಕವೇ ನಡೆಸಬೇಕಾಗುತ್ತದೆ.