ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲ್ಲುಜ್ಜುವ ಬ್ರಶ್ನಿಂದ ಸಾಮಾನ್ಯವಾಗಿ ಏನು ಮಾಡೋಕೆ ಸಾಧ್ಯ? ಬಾಯಿ ಸ್ವಚ್ಛಗೊಳಿಸಬಹುದು ಆದರೆ ಈ ವಿಚಾರ ಕೇಳಿದ್ರೆ ನಿಮ್ಮ ತಲೆ ತಿರುಗೋದು ಗ್ಯಾರೆಂಟಿ. ಹಲ್ಲುಜ್ಜುವ ಬ್ರಶ್ ಜೈಲಿನ ಗೋಡೆಯನ್ನು ಒಡೆಯಲೂಬಹುದು. ಇಬ್ಬರು ಕೈದಿಗಳು ಟೂತ್ ಬ್ರಶ್ ಬಳಸಿ ಜೈಲಿನ ಗೋಡೆಗೆ ರಂಧ್ರ ಮಾಡಿ ಪರಾರಿಯಾಗಿದ್ದಾರೆ.
ಈ ಆಘಾತಕಾರಿ ಘಟನೆ ವರ್ಜೀನಿಯಾದಲ್ಲಿ ನಡೆದಿದೆ. ಜೈಲಿನಲ್ಲಿ ಇಬ್ಬರು ಕೈದಿಗಳು ಮಾಡಿರುವ ಕೆಲಸ ಪೊಲೀಸರೇ ಬೆಚ್ಚಿ ಬೀಳುವಂತೆ ಮಾಡಿದೆ. ಜಾನ್ ಗಾರ್ಜಾ (37) ಮತ್ತು ಅರ್ಲೆ ನೆಮೊ (43) ಅವರನ್ನು ಕ್ರೆಡಿಟ್ ಕಾರ್ಡ್ ವಂಚನೆಗಾಗಿ ಬಂಧಿಸಿ ಜೈಲಿಗಟ್ಟಲಾಗಿದೆ. ಆದರೆ, ಇಬ್ಬರೂ ಜೈಲಿನಿಂದ ತಪ್ಪಿಸಿಕೊಳ್ಳಲು ಖತರ್ನಾಕ್ ಸ್ಕೆಚ್ ಹಾಕಿದ್ದರು. ಇದಕ್ಕಾಗಿ ಅವರು ಹಲ್ಲುಜ್ಜುವ ಬ್ರಶ್ ಅನ್ನು ಆಯುಧವನ್ನಾಗಿ ಮಾಡಿಕೊಂಡರು. ಕೆಲ ದಿನಗಳಿಂದ ಜೈಲಿನ ಗೋಡೆಗೆ ಹಲ್ಲುಜ್ಜುವ ಬ್ರಷ್ ಹಾಗೂ ಲೋಹದ ವಸ್ತುವಿನ ಸಹಾಯದಿಂದ ರಂಧ್ರ ಕೊರೆದು ಅಲ್ಲಿಂದ ಪರಾರಿಯಾಗಿದ್ದಾರೆ.
ಇದಾದ ಕೆಲವೇ ಗಂಟೆಗಳಲ್ಲಿ ಪೊಲೀಸರಿಗೆ ಲೆಕ್ಕ ತಪ್ಪಿದ್ದು, ಇಬ್ಬರು ಮಿಸ್ಸಿಂಗ್ ಎಂಬುದು ಕಂಡು ತನಿಖೆ ಶುರು ಮಾಡಿದ್ದಾರೆ. ತಪ್ಪಿಸಿಕೊಂಡ ಇಬ್ಬರು ಕೈದಿಗಳನ್ನು ಹಿಡಿಯಲು ಫೀಲ್ಡಿಗಿಳಿದವರಿಗೆ ಜೈಲಿನ ಸಮೀಪದ ಅಪಾರ್ಟ್ ಮೆಂಟ್ ನಿವಾಸಿಗಳ ನೆರವಿನಿಂದ ಇಬ್ಬರು ಕೈದಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಟೂತ್ ಬ್ರಶ್ನಿಂದಾಗಿ ಜೈಲಿನ ಗೋಡೆ ಒಡೆದು ಓಡಿ ಹೋಗಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವೆಡೆ ಜೈಲಿನ ಗೋಡೆಗಳು ದುರ್ಬಲವಾಗಿರುವುದು ಕಂಡುಬಂದಿದ್ದು, ತಕ್ಷಣವೇ ದುರಸ್ತಿ ಪ್ರಾರಂಭಿಸಿದ್ದಾರೆ.