ಅಮಿತ್ ಶಾ ಲೋಕಾರ್ಪಣೆಗೊಳಿಸಿದ ಗೊರಟಾ ಸ್ಮಾರಕ ಏನನ್ನು ನೆನಪಿಸುತ್ತದೆ ಗೊತ್ತೇ?

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಗೃಹ ಸಚಿವ ಅಮಿತ್ ಶಾ ಭಾನುವಾರ ಬೀದರ್ ಜಿಲ್ಲೆಯ ಗೊರಟಾ ಮೈದಾನದಲ್ಲಿ 103 ಅಡಿ ಎತ್ತರದ ರಾಷ್ಟ್ರಧ್ವ ಜ,‘ಬಲಿದಾನದ ಸ್ಮಾರಕ’ ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲ್ ರ 11 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು “ಬಸವೇಶ್ವರರು ಅನುಭವ ಮಂಟಪದ ಮೂಲಕ‌ ಸಂಸತ್ತನ್ನು ಮೊದಲು ಪರಿಚಯಿಸಿದರು. ಇದು ನನ್ನ ಜೀವನದ ಮಹತ್ವದ ದಿನ. ನಿಜಾಮನ ಕ್ರೂರ ಸೈನ್ಯ ಗೊರಟಾದಲ್ಲಿ ಅನೇಕರನ್ನು ಹತ್ಯೆ ಮಾಡಿತ್ತು. ಇಂದು ಅದೇ ಗ್ರಾಮದಲ್ಲಿ 103 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಾಡುತ್ತಿದೆ. ಹಿಂದೆ ಹೈದ್ರಾಬಾದ್ ಪ್ರಾಂತ್ಯವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ದೇಶದಲ್ಲಿ ವಿಲೀನಗೊಳಿಸಿದ್ದರು. ಈ ಹಿಂದೆ ನಾನೇ ಗೊರಟಾ ಗ್ರಾಮದಲ್ಲಿ ಸ್ಮಾರಕದ ಶಂಕುಸ್ಥಾಪನೆ ಮಾಡಿದ್ದೆ, ಇಂದು ನಾನೇ ಅದನ್ನು ಉದ್ಘಾಟನೆ ಮಾಡಿದ್ದೇನೆ. ಗೊರಟ ಗ್ರಾಮದಲ್ಲಿ ಈ ಹುತಾತ್ಮರ ಸ್ಮಾರಕವನ್ನ ಐತಿಹಾಸಿಕ ಪ್ರವಾಸಿ ಸ್ಥಳವಾಗಿ ಅಭಿವೃದ್ದಿ ಪಡಿಸಿ. ಮುಂದಿನ ದಿನದಲ್ಲಿ 50 ಕೋಟಿ ವೆಚ್ಚದಲ್ಲಿ ಅದ್ದೂರಿ ಸ್ಮಾರಕ ನಿರ್ಮಾಣ ಮಾಡಲಾಗುವುದು” ಎಂದರು.

ಗೊರಟಾ ಸ್ಮಾರಕದ ಇತಿಹಾಸ :

ಆಗಸ್ಟ್‌ 15,1947ರಂದು ಇಡೀ ದೇಶವೇ ಸ್ವಾತಂತ್ಯ್ರ ಸಿಕ್ಕ ಸಂಭ್ರಮಾಚರಣೆಯಲ್ಲಿದ್ದರೆ, ಹೈದರಾಬಾದ್‌ ನಿಜಾಮರ ವಶದಲ್ಲಿದ್ದ ಕರ್ನಾಟಕ, ಬೀದರ್‌, ಯಾದಗಿರಿ, ಗುಲ್ಬರ್ಗ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ಮಾತ್ರ ಆ ಸಂತಸವನ್ನು ಅನುಭವಿಸಲಿಲ್ಲ. ಈ ನಡುವೆಯೇ ಹೈದರಾಬಾದ್‌ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿ ಬಸವಕಲ್ಯಾಣ ತಾಲ್ಲೂಕಿನ ಗೊರಟಾ ಗ್ರಾಮದಲ್ಲಿ ವಂದೇ ಮಾತರಂ, ಭಾರತ ಮಾತಾಕೀ ಜೈ ಘೋಷಣೆಗಳೊಂದಿಗೆ ರಾಷ್ಟ್ರಧ್ವಜದ ಮೆರವಣಿಗೆ ನಡೆಯಿತು. ಅದನ್ನು ಸಹಿಸದ ರಜಕಾರರು ಇಡೀ ಗ್ರಾಮಕ್ಕೇ ಬೆಂಕಿ ಇಟ್ಟರು. ಈ ಹತ್ಯಾಕಾಂಡದ ದಳ್ಳುರಿಯಲ್ಲಿ ಒಂದೇ ದಿನದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡರು. ಸ್ವಾತಂತ್ರ್ಯ ಹೋರಾಟದ ನರಮೇಧಕ್ಕೆ ಸಾಕ್ಷಿಯಾದ ಈ ಗ್ರಾಮ ʼಕರ್ನಾಟಕದ ಜಲಿಯನ್‌ ವಾಲಾಬಾಗ್‌ʼ ಎಂದೇ ಹೆಸರಾಯಿತು.

ಇಲ್ಲಿ ಸ್ಮಾರಕ ನಿರ್ಮಿಸುವ ಬೇಡಿಕೆ ಬಹಳ ಹಳೆಯದಾಗಿತ್ತಾದರೂ, ಇದೀಗ ಬಿಜೆಪಿ ಯುವಮೋರ್ಚ ಪ್ರಯತ್ನದಿಂದ ಅಂಥದೊಂದು ಕನಸು ಸಾಕಾರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here