ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಯಾರು ಸಿಎಂ ಆಗಬೇಕು ಎಂಬ ಕಾರಣಕ್ಕೆ ಪರಸ್ಪರ ಕಚ್ಚಾಡುವವರನ್ನು ತಿರಸ್ಕರಿಸಿ ಶಿಸ್ತು ಹಾಗೂ ದೇಶಭಕ್ತರನ್ನು ಆಯ್ಕೆ ಮಾಡಬೇಕು ಎಂದು ಅಮಿತ್ ಶಾ ಕರೆ ನೀಡಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ಲೋಕಾರ್ಪಣೆ ಮಾಡಿದ ನಂತರಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ನಾನು ಸೌಭಾಗ್ಯವಂತ ಎಂದು ಭಾವಿಸಿದ್ದೇನೆ. ಕರ್ನಾಟಕ ಹಾಗೂ ಭಾರತದ ಸಂದೇಶವನ್ನು ವಿಶ್ವದೆಲ್ಲೆಡೆ ಪಸರಿಸುವ ಕಾರ್ಯವನ್ನು ಈ ಇಬ್ಬರೂ ಮಹನೀಯರು ಮಾಡಿದ್ದಾರೆ. ವಿಧಾನಸೌಧಕ್ಕೆ ಮುಂದೆ ಯಾರೆಲ್ಲ ಶಾಸಕರಾಗಿ ಆಗಮಿಸುತ್ತಾರೆಯೋ ಅವರು ಇಬ್ಬರು ಮಹನೀಯರ ಮೌಲ್ಯಗಳನ್ನು ಕಲಿಯಲಿದ್ದಾರೆ ಎಂದರು.
ಬಸವಣ್ಣನವರ ಪ್ರತಿಮೆ, ಭಾರತವು ಪ್ರಜಾಪ್ರಭುತ್ವದ ತಾಯಿ ಎಂಬ ಸಂದೇಶವನ್ನು ನೀಡುತ್ತದೆ. ಅನುಭವ ಮಂಟಪದ ಮೂಲಕ ಸಮಾಜದ ಎಲ್ಲರನ್ನೂ ಒಟ್ಟಿಗೆ ತಂದ ಸಾಹಸವನ್ನು ಬಸವೇಶ್ವರರನ್ನು ಬಿಟ್ಟು ಬೇರೆ ಯಾರೂ ಮಾಡಲಿಲ್ಲ. ಮಹಿಳೆಯರೂ ಅನುಭವ ಮಂಟಪದಲ್ಲಿ ತಮ್ಮ ವಿಚಾರವನ್ನು ಪ್ರಕಟಿಸಿದರು. ದಾಸೋಹ ಪರಿಕಲ್ಪನೆಯನ್ನು ಬಸವಣ್ಣ ಕಲಿಸಿದರು. ಅನೇಕ ಸಮಾಜ ಸುಧಾರಕರನ್ನು ಜಗತ್ತಿಗೆ ಪರಿಚಯಿಸಿದರು. ದರ್ಶ ಜೀವನ ಏನು ಎಂದು ತಿಳಿಯಲು ಬಸವಣ್ಣನವರ ಮಾರ್ಗದಲ್ಲಿ ನಡೆಯಬೇಕು. ಪ್ರಜಾಪ್ರಭುತ್ವದ ಮೇಳೆ ನಂಬಿಕೆ ಇಡುವ ಜಗತ್ತಿನ ಎಲ್ಲರಿಗೂ ಬಸವಣ್ಣನವರ ಪ್ರತಿಮೆಯೇ ಮಾದರಿ ಎಂದರು.
ಕೆಂಪೇಗೌಡರು ಉತ್ತಮ ಆಡಳಿತ ನಡೆಸಿದರು. ಶಕ್ತಿ ಎನ್ನುವುದು ಪ್ರಬಲ ಧ್ವನಿಯಲ್ಲಿ ಇರುವುದಿಲ್ಲ, ವಿಚಾರದಲ್ಲಿರುತ್ತದೆ. ಏಕೆಂದರೆ ಬೆಳೆಯು ಮಳೆಯಿಂದ ಬರುತ್ತದೆಯೇ ಹೊರತು ಪ್ರವಾಹದಿಂದಲ್ಲ. ಆಡಳಿತದ ಶಾಶ್ವತ ಕೆಲಸ ಹೇಗಿರಬೇಕು ಎಂದು ತಿಳಿಯಲು ನಾಡಪ್ರಭು ಕೆಂಪೇಗೌಡರನ್ನು ಅರಿಯಬೇಕು. ಸಾಮ್ರಾಟ್ ಅಚ್ಯುತರಾಯರ ಮಾರ್ಗದರ್ಶನದಲ್ಲಿ ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಿದರು ಎಂದರು.
ಕೋವಿಡ್ ಸಮಯದಲ್ಲಿ ಆಡಳಿತ ನಡೆಸಿದ್ದಕ್ಕೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನೆಗಳು. ಯಡಿಯೂರಪ್ಪ ಅವರ ಮಾರ್ಗದಲ್ಲೇ ಬೊಮ್ಮಾಯಿ ಅವರು ಆಡಳಿತ ನಡೆಸಿದ್ದಾರೆ. ಇವರಿಬ್ಬರ ಆಡಳಿತದಲ್ಲಿ ಕರ್ನಾಟಕ ಅನೇಕ ಸಾಧನೆ ಮಾಡಿದೆ. ಹಿಂದಿನ ಚುನಾವಣೆಯಲ್ಲಿ ಸ್ವಲ್ಪ ಕಡಿಮೆ ಸೀಟುಗಳು ಬಂದವು, ಇದರಿಂದ ಅನೇಕ ತೊಂದರೆ ಆಯಿತು. ಈ ಬಾರಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿ. ಈ ಸರ್ಕಾರವು ಕರ್ನಾಟಕವನ್ನು ಅಭಿವೃದ್ಧಿ ಮಾರ್ಗದಲ್ಲಿ ಕೊಂಡೊಯ್ಯುತ್ತದೆ ಎಂದು ಭರವಸೆ ನೀಡುತ್ತೇನೆ ಎಂದರು
ಕಾಂಗ್ರೆಸ್ ಹಾಗೂ ಜೆಡಿಎಸ್ ಅಲ್ಪಸಂಖ್ಯಾತ ಮೀಸಲಾತಿ ನೀಡುತ್ತಿದ್ದರು. ಈ ಮೀಸಲಾತಿಯನ್ನು ಒಕ್ಕಲಿಗ ಹಾಗೂ ಲಿಂಗಾಯತರಿಗೆ ನೀಡುವ ಮೂಲಕ ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನಕ್ಕೆ ಅನುಗುಣವಾಗಿ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ಮೋದಿ ಸರ್ಕಾರ ಅನೇಕ ಕೊಡುಗೆ ನೀಡಿದೆ. ಚೆನ್ನೈ-ಬೆಂಗಳೂರು-ಮೈಸೂರು ಜೋಡಿಸುವ ಮಾರ್ಗಕ್ಕೆ ಸರ್ಕಾರ ಸುಮಾರು 75 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ. 2009ರಿಂದ 2014ರವರೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ತೆರಿಗೆ ಪಾಲು ಹಾಗೂ ಅನುದಾನದ ರೂಪದಲ್ಲಿ ಕರ್ನಾಟಕಕ್ಕೆ 94 ಸಾವಿರ ಕೋಟಿ ರೂ. ನೀಡಲಾಗಿತ್ತು. ಆದರೆ 2014ರಿಂದ 2019ರವರೆಗೆ 2.25 ಲಕ್ಷ ಕೋಟಿ ರೂ. ನೀಡಲಾಗಿದೆ. ಇದಕ್ಕೆ ಕಾಂಗ್ರೆಸ್ ಸ್ನೇಹಿತರು ಉತ್ತರ ನೀಡಬೇಕು.ಯಾರು ಮುಖ್ಯಮಂತ್ರಿ ಆಗಬೇಕು ಎಂದು ಜಗಳ ಮಾಡುವವರು ಬೇಕಿಲ್ಲ. ಶಿಸ್ತಿನ ದೇಶಭಕ್ತರ ಸಮೂಹ ಮೋದಿ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತದೆ. ಬೆಂಗಳೂರಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕಮಲ ಅರಳುವಂತೆ ಮಾಡಿ ಎಂದು ಜನರಿಗೆ ಮನವಿ ಮಾಡಿದರು.