ಹೊಸದಿಗಂತ ವರದಿ,ಮಂಡ್ಯ :
ಸನಾತನ ಸಂಸ್ಕೃತಿ ಮತ್ತು ಹಿಂದು ಧರ್ಮದಲ್ಲಿ ಗೌರವ ಹೊಂದಿರುವ ಬ್ರಾಹ್ಮಣರನ್ನು ನಿಂದಿಸುವುದು ರಾಜಕಾರಣಿಗಳಿಗೆ ಶೋಭೆ ತರುವ ವಿಚಾರವಲ್ಲ ಎಂದು ಕುಕ್ಕೆ ಸುಬ್ರಹ್ಮಣ್ಯ ಮಠದ ಪೀಠಾಧ್ಯಕ್ಷ ಶ್ರೀ ವಿದ್ಯಾಪ್ರಸನ್ನ ತೀರ್ಥಶ್ರೀಗಳು ಭಾನುವಾರ ಹೇಳಿದರು.
ಮದ್ದೂರು ಪಟ್ಟಣದ ಪುರಾಣ ಪ್ರಸಿದ್ಧ ಹೊಳೇ ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು.
ಸಮಗ್ರ ಸಮಾಜಕ್ಕೆ ಒಳಿತಾಗಬೇಕೆಂಬುದು ಬ್ರಾಹ್ಮಣರ ಪ್ರಮುಖ ಉದ್ದೇಶವಾಗಿದೆ. ದೇಗುಲಗಳಲ್ಲಿ ಪೂಜೆ ಮಾಡುವ ಅರ್ಚಕರುಗಳು ಸಹ ಕೇವಲ ತಮ್ಮ ಒಳಿತಿಗಾಗಿ ಪೂಜೆ ಮಾಡುವುದಿಲ್ಲ. ಸರ್ವೇಜನಃ ಸುಖಿನೋ ಭವಂತು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ ಎಂದರು.
ಲೋಕದ ಒಳಿತು ಸಂಸ್ಕೃತಿಯ ರಕ್ಷಣೆಯ ಆಶಯ ಇಟ್ಟುಕೊಂಡಿರುವ ಬ್ರಾಹ್ಮಣ ಸಮಾಜವನ್ನು ರಾಜಕಾರಣಿಗಳು ಅನಾವಶ್ಯಕವಾಗಿ ದೂಷಿಸುತ್ತಿರುವುದು ಸರಿಯಲ್ಲ, ಈ ವಿಚಾರದಲ್ಲಿ ಬ್ರಾಹ್ಮಣರು ಸುಮ್ಮನೆ ಇದ್ದರೂ ಅದು ಅವರ ದೌರ್ಬಲ್ಯ ಎಂದುಕೊಂಡು ಬಹಳಷ್ಟು ಮಂದಿ ಸಮಾಜದಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇವಲ ಬ್ರಾಹ್ಮಣ ಸಮುದಾಯದ ಮಾತ್ರವಲ್ಲದೆ, ಬೇರೆ ಯಾವುದೇ ವರ್ಗವನ್ನು ದೂಷಿಸುವುದರಿಂದ ತಮಗೆ ಪ್ರಚಾರ ಸಿಗುತ್ತದೆ ಎಂಬ ಭಾವನೆ ಹೊಂದಿರುವ ವ್ಯಕ್ತಿಗಳಿಂದ ಸಮಾಜ ಉದ್ದಾರವಾಗುವುದಿಲ್ಲ. ಇದರಿಂದ ಪರಸ್ಪರ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ವಿದ್ಯಾಪ್ರಸನ್ನ ಶ್ರೀಗಳು ಅಭಿಪ್ರಾಯಿಸಿದರು.
ಸಾಮೂಹಿಕ ಜಾಲತಾಣಗಳಲ್ಲಿ ಅತಿಯಾದ ಬಳಕೆಯಿಂದ ಯುವಕರು ದಾರಿ ತಪ್ಪುತ್ತಿರುವುದನ್ನು ಇಂದಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಪೋಷಕರು ಎಚ್ಚರ ವಹಿಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಶ್ರೀ ಹೊಳೇ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಿದ ನಂತರ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನತೆ ಪಠ್ಯ, ಕ್ರೀಡೆ, ಧಾರ್ಮಿಕ ಚಟುವಟಿಕೆಗಳಿಗಿಂತ ಸ್ಮಾರ್ಟ್ ಫೋನ್ಗಳ ಮೂಲಕ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಇದರಿಂದ ಬುದ್ಧಿವಂತರಾಗುವ ಬದಲು ಅನ್ಯಮಾರ್ಗದತ್ತ ತೆರಳುತ್ತಿದ್ದಾರೆ. ಈ ಸೂಕ್ಷ್ಮವನ್ನು ಅರಿತು ಸರ್ಕಾರ ಮತ್ತು ಪೋಷಕರು ಸಾಮಾಜಿಕ ಜಾಲತಾಣಗಳ ಒಳಿತು ಮತ್ತು ಕೆಡುಕುಗಳ ಬಗ್ಗೆ ಯುವಕರಿಗೆ ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.
ಗೋವುಗಳು ಭಾರತದ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿವೆ. ಇಂತಹ ಗೋವುಗಳನ್ನು ರಾಷ್ಟ್ರೀಯ ಪ್ರಾಣಿ ಎಂದು ಸರ್ಕಾರ ಘೋಷಣೆ ಮಾಡಬೇಕು. ಗೋಹತ್ಯೆ ಸಂಪೂರ್ಣ ನಿಷೇದಕ್ಕೆ ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷಗಳು ನಿರಂತರವಾಗಿ ನಡೆಯುತ್ತಿವೆ. ಸರ್ಕಾರ ಇದರ ನಿಯಂತ್ರಣಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿಆದಿತ್ಯನಾಥ್ ಕೈಗೊಂಡಿರುವ ಕ್ರಮಗಳನ್ನು ಇತರೆ ರಾಜ್ಯಗಳಲ್ಲೂ ಜಾರಿಗೆ ತರಲು ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಹೈಕೋರ್ಟಿನ 36ನೇ ಪೀಠದ ನ್ಯಾಯಮೂರ್ತಿ ಶ್ರೀಶಾನಂದ, ಮದ್ದೂರು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಪಿ. ಕಿರಣ್, ಎನ್.ವಿ. ಕೋನಪ್ಪ, ಮನ್ಮುಲ್ ನಿರ್ದೇಶಕರಾದ ರೂಪ, ಕೆ.ರಾಮಚಂದ್ರ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಮುಖಂಡರಾದ ಜಿ.ಎನ್. ನರಸಿಂಹಮೂರ್ತಿ, ಭಾರ್ಗವ, ಸಿಪಾಯಿ ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ