Friday, December 19, 2025

ವಿನೇಶ್ ಫೋಗಟ್‌ರಿಂದ ನಿವೃತ್ತಿ ವಾಪಸ್: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಕಮ್‌ಬ್ಯಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತೂಕದ ವಿವಾದದಿಂದಾಗಿ ಕೂದಲೆಳೆಯ ಅಂತರದಲ್ಲಿ ಪದಕ ವಂಚಿತರಾಗಿದ್ದ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳುವ ಆಘಾತಕಾರಿ ನಿರ್ಧಾರವನ್ನು ಹಿಂಪಡೆದಿದ್ದಾರೆ. ಪ್ಯಾರಿಸ್‌ನಲ್ಲಿನ ನಿರಾಶೆಯ ನಂತರ ಆಗಸ್ಟ್‌ನಲ್ಲಿ ರಾಜಕೀಯದತ್ತ ಮುಖ ಮಾಡಿದ್ದ ವಿನೇಶ್, ಇದೀಗ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡಿದ್ದು, ಮತ್ತೊಮ್ಮೆ ಕುಸ್ತಿ ಅಖಾಡಕ್ಕಿಳಿಯಲು ಸಿದ್ಧರಾಗಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆಜಿ ವಿಭಾಗದ ಫೈನಲ್‌ಗೆ ಅರ್ಹತೆ ಪಡೆದಿದ್ದರೂ, ಅಂತಿಮ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ತೂಕ ಅಧಿಕವಾದ ಕಾರಣ ಅನರ್ಹಗೊಂಡಿದ್ದು, ವಿನೇಶ್‌ಗೆ ದುಃಸ್ವಪ್ನವಾಗಿ ಕಾಡಿತ್ತು. ರಿಯೊ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದ ವಿನೇಶ್, ಈ ಹಿನ್ನೆಲೆಯಲ್ಲಿ ನಿವೃತ್ತಿ ಘೋಷಿಸಿದ್ದರು.

ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂತೆಗೆದುಕೊಂಡಿರುವ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ವಿನೇಶ್ ಫೋಗಟ್, ತಮ್ಮ ಮುಂದಿನ ಗುರಿ 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್‌ ಒಲಿಂಪಿಕ್ಸ್ ಎಂದು ಸ್ಪಷ್ಟಪಡಿಸಿದ್ದಾರೆ.

“ಜನರು ಪ್ಯಾರಿಸ್ ಒಲಿಂಪಿಕ್ಸ್​ ನನ್ನ ಕೊನೆಯ ಪ್ರವಾಸವೇ ಎಂದು ನನ್ನನ್ನು ಆಗಾಗ್ಗೆ ಕೇಳುತ್ತಿದ್ದರು. ಬಹಳ ಸಮಯದವರೆಗೆ ನನ್ನಲ್ಲಿ ಉತ್ತರವಿಲ್ಲ. ನಾನು ಒತ್ತಡ, ನಿರೀಕ್ಷೆಗಳು ಮತ್ತು ನನ್ನ ಕನಸುಗಳಿಂದ ದೂರವಿರಲು ಬಯಸಿದ್ದೆ. ಈ ವಿರಾಮದಲ್ಲಿ ನಾನು ಆಯಾಸ ಮತ್ತು ಶಬ್ದದ ಕೆಳಗೆ ಹೂತುಹೋಗಿದ್ದ ಒಂದು ವಿಷಯವನ್ನು ಕಂಡುಕೊಂಡೆ: ‘ಬೆಂಕಿ ಎಂದಿಗೂ ಆರುವುದಿಲ್ಲ’. ನಾನು ಇನ್ನೂ ಕ್ರೀಡೆಯನ್ನು ಪ್ರೀತಿಸುತ್ತೇನೆ ಮತ್ತು ಸ್ಪರ್ಧಿಸಲು ಬಯಸುತ್ತೇನೆ,” ಎಂದು ವಿನೇಶ್ ಬರೆದಿದ್ದಾರೆ.

“ಶಿಸ್ತು, ದಿನಚರಿ, ಹೋರಾಟ… ಅದು ನನ್ನ ಬದುಕಿನಲ್ಲಿ ಬೇರೂರಿದೆ. ನಾನು ಎಷ್ಟೇ ದೂರ ಹೋದರೂ, ನನ್ನ ಒಂದು ಭಾಗವು ಅಖಾಡದ ಮೇಲೆಯೇ ಉಳಿದಿದೆ. ಹಾಗಾಗಿ ಇಲ್ಲಿ ನಾನು, ನಿರ್ಭೀತ ಹೃದಯ ಮತ್ತು ಯಾರಿಗೂ ಬಗ್ಗದ ಮನೋಭಾವದೊಂದಿಗೆ 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್‌ ಒಲಿಂಪಿಕ್ಸ್​ಗೆ ಸಿದ್ಧತೆ ನಡೆಸಲಿದ್ದೇನೆ. ಈ ಬಾರಿ ನನ್ನ ಬೆಂಬಲಕ್ಕೆ ನನ್ನ ಮಗ ಕೂಡ ಇರುತ್ತಾನೆ,” ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

ಪ್ಯಾರಿಸ್‌ನ ತೀವ್ರ ನಿರಾಶೆಯನ್ನು ಮರೆತು, ವಿನೇಶ್ ಫೋಗಟ್ ಈಗ ಹೊಸ ಹುರುಪಿನೊಂದಿಗೆ ಮತ್ತೆ ಅಖಾಡದಲ್ಲಿ ಮಿಂಚಲು ಸಜ್ಜಾಗಿದ್ದಾರೆ.

error: Content is protected !!