ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕಿಯೊಬ್ಬಳ ಪ್ರಾಣ ಉಳಿಸಲು ಕೇಂದ್ರ ಸರ್ಕಾರವು 7 ಲಕ್ಷ ರೂಪಾಯಿ ಜಿಎಸ್‌ಟಿಗೆ ವಿನಾಯಿತಿ ನೀಡಿದೆ. ಇದರ ಜೊತೆಗೆ ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಬಾಲಕಿಗೆ ಅಗತ್ಯ ನೆರವಿನ ವ್ಯವಸ್ಥೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಿಹಾರಿಕಾ ಎಂಬ ಬಾಲಕಿಯು ನ್ಯೂರೋಬ್ಲಾಸ್ಟೋಮಾ (Neuroblastoma) ಎಂಬ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈಕೆಗೆ ಕ್ಯಾನ್ಸರ್ ನಾಲ್ಕನೇ ಸ್ಟೇಜ್‌ನಲ್ಲಿದೆ. ಈ ಬಾಲಕಿಯ ಪ್ರಾಣ ಉಳಿಸಲು ಡಿನುಟುಕ್ಸಿಮ್ಯಾಬ್ ಬೆಟಾ (Dinutuximab Beta) ಅಥವಾ ಕರ್ಜಿಬಾ (Qarziba) ಎಂಬ ಇಂಜೆಕ್ಷನ್ ಅಗತ್ಯವಿತ್ತು. ಈ ಇಂಜೆಕ್ಷನ್‌ನ ಒಂದು ಬಾಟಲಿಗೆ 10 ಲಕ್ಷ ರೂಪಾಯಿ ಇದ್ದು, ಇದನ್ನು ವಿದೇಶದಿಂದ ತರಿಸಬೇಕು. ಆದ್ರೆ ಅಲ್ಲಿಂದ ತರಲು ಒಟ್ಟು 63 ಲಕ್ಷ ರೂಪಾಯಿ ಖರ್ಚು ಮಾಡಬೇಕಿತ್ತು. ಯಾಕೆಂದರೆ ಇದಕ್ಕೆ 7 ಲಕ್ಷ ರೂಪಾಯಿ ಜಿಎಸ್‌ಟಿ ಕಟ್ಟಬೇಕಿರುತ್ತದೆ. ಇದರಿಂದ ನಿಹಾರಿಕಾಳ ಕುಟುಂಬದವರು ಇಷ್ಟೊಂದು ಮೊತ್ತ ಭರಿಸಲು ಆಗುತ್ತಿರಲಿಲ್ಲ.
ಈ ವೇಳೆ ನಿಹಾರಿಕಾ ಕುಟುಂಬದ ಸಂಕಷ್ಟ ಅರಿತ ಶಶಿ ತರೂರ್ ಅವರು ನೆರವಿಗೆ ಧಾವಿಸಿದ್ದಾರೆ. ಮಾನವೀಯತೆ ಆಧಾರದ ಮೇಲೆ 7 ಲಕ್ಷ ರೂಪಾಯಿ ಜಿಎಸ್‌ಟಿ ಮನ್ನಾ ಮಾಡಬೇಕು ಎಂಬುದಾಗಿ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆಯುತ್ತಾರೆ. ಆದರೆ, ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಮತ್ತೊಂದೆಡೆ, ಔಷಧವು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು, ತೆರಿಗೆ ಕಟ್ಟದಿದ್ದರೆ ಅದನ್ನು ನೀಡುವುದಿಲ್ಲ ಎಂಬುದಾಗಿ ಕಸ್ಟಮ್ಸ್ ಅಧಿಕಾರಿಗಳು ಹೇಳುತ್ತಾರೆ.
ಆ ಕ್ಷಣ ಶಶಿ ತರೂರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನೇರವಾಗಿ ಕರೆ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಜಿಎಸ್‌ಟಿ ವಿನಾಯಿತಿ ನೀಡಲು ಒಪ್ಪಿ, ಕೊನೆಗೆ ಮಾರ್ಚ್ 28ರಂದು ಔಷಧಿಯು ನಿಹಾರಿಕಾ ಕುಟುಂಬಸ್ಥರ ಕೈ ಸೇರುತ್ತದೆ.
ಇಡೀ ಘಟನೆಯನ್ನು ಶಶಿ ತರೂರ್ ಅವರು ಪತ್ರದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. ‘ಪುಟ್ಟ ಬಾಲಕಿಗೆ ಈಗ ಇಂಜೆಕ್ಷನ್ ಸಿಗಲಿದೆ. ಆಕೆ ಬದುಕುಳಿಯಲಿದ್ದಾಳೆ. ಕೇಂದ್ರ ಸರ್ಕಾರವು ಏಳು ಲಕ್ಷ ರೂಪಾಯಿ ಆದಾಯವನ್ನು ಬಿಟ್ಟಿದೆ. ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳು. ರಾಜಕೀಯದ ಹೊರತಾಗಿಯೂ ನೀವು ಮಾನವೀಯತೆ ಮೆರೆದಿದ್ದೀರಿ. ಸರ್ಕಾರದ ಮೇಲೆ ನಾನು ಇಟ್ಟಿರುವ ನಂಬಿಕೆಯನ್ನು ಹೆಚ್ಚಿಸಿದ್ದೀರಿ’ ಎಂಬುದಾಗಿ ಭಾವುಕರಾಗಿ ಸಚಿವೆಗೆ ಧನ್ಯವಾದ ತಿಳಿಸಿದ್ದಾರೆ.