ಹೊಸದಿಗಂತ ವರದಿ ಮಂಡ್ಯ:
ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಯ ಐತಿಹಾಸಿಕ ಶ್ರೀ ವೈರಮುಡಿ ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ವಜ್ರಖಚಿತ ವೈರಮುಡಿ, ರಾಜಮುಡಿ ಮತ್ತು ಇತರ ವಜ್ರಾಭರಣಗಳನ್ನು ಜಿಲ್ಲಾ ಖಜಾನೆಯಿಂದ ಶನಿವಾರ ಬೆಳಗ್ಗೆ ಮೇಲುಕೋಟೆಗೆ ಕೊಂಡೊಯ್ಯಲಾಯಿತು.
ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಲ್ಲಿಟ್ಟಿದ್ದ ವೈರಮುಡಿ ಸಹಿತ ವಜ್ರಾಭರಣಗಳ ಎರಡು ಗಂಟುಗಳನ್ನು ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು, ನೇತೃತ್ವದಲ್ಲಿ ಬೆಳಗ್ಗೆ 7.30 ಗಂಟೆಗೆ ಹೊರ ತೆಗೆಯಲಾಯಿತು. ಬಳಿಕ ಖಜಾನೆ ಮುಖ್ಯದ್ವಾರದಲ್ಲಿ ಆಭರಣಗಳ ಗಂಟುಗಳನ್ನಿಟ್ಟು ಅವುಗಳಿಗೆ ಹಾರ ತೊಡಿಸಿ, ಸಾಂಪ್ರದಾಯಿಕವಾಗಿ ಪ್ರಥಮ ಪೂಜೆ ನೆರವೇರಿಸಲಾಯಿತು.
ಈ ವೇಳೆ ಅಧಿಕಾರಿಗಳು ವೈರಮುಡಿ ಮತ್ತು ವಜ್ರಾಭರಣಗಳಿದ್ದ ಗಂಟುಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.
ಕೇವಲ 15 ನಿಮಿಷದ ಅವಧಿಯಲ್ಲಿ ಪೂಜೆ ಮುಗಿಸಿ, ಆಭರಣಗಳ ಗಂಟುಗಳನ್ನು ಶ್ರೀ ಚಲುವನಾರಾಯಣಸ್ವಾಮಿ ದೇವಾಲಯದ ಮೊದಲ ಸ್ಥಾನೀಕಂ ಕರಗಂ ನಾರಾಯಣ ಅಯ್ಯಂಗಾರ್, ಕರಗಂ ರಂಗಪ್ರಿಯ ಅವರಿಗೆ ಹಸ್ತಾಂತರಿಸಲಾಯಿತು. ಬೆಳಗ್ಗೆ 7.45ಕ್ಕೆ ಖಜಾನೆ ಆವರಣದಿಂದ ವಾಹನ ನಿರ್ಗಮಿಸಿತು.
ಜಾನಪದ ಸಂಭ್ರಮ:
ಜಿಲ್ಲಾ ಖಜಾನೆಯಿಂದ ವೈರಮುಡಿ ಮತ್ತು ರಾಜಮುಡಿಯನ್ನು ಕೊಂಡೊಯ್ಯುವ ವೇಳೆ ಪೂಜಾ ಕುಣಿತ, ಡೊಳ್ಳು ಕುಣಿತ, ಗಾರುಡಿ ಗೊಂಬೆ, ವೀರಗಾಸೆ, ತಮಟೆ, ಕೊಂಬು-ಕಹಳೆ, ಮಂಗಳವಾದ್ಯಗಳೊಂದಿಗೆ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್, ಪಾಂಡವಪುರ ತಹಸಿಲ್ದಾರ್, ಪೊಲೀಸ್ ಸೇರಿದಂತೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ವಾಹನವೇರಿದ ವೈರಮುಡಿ:
ವೈರಮುಡಿ ಉತ್ಸವದ ಅಂಗವಾಗಿ ವರ್ಷಕ್ಕೊಮ್ಮೆ ಮಾತ್ರ ವೈರಮುಡಿ ಕಿರೀಟವನ್ನು ಖಜಾನೆಯಿಂದ ಹೊರ ತೆಗೆಯಲಾಗುತ್ತದೆ. ಮೈಸೂರಿನ ಶ್ರೀ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮಿ ಮಠದ ವಾಹನದಲ್ಲಿ ವೈರಮುಡಿ, ರಾಜಮುಡಿ ಮತ್ತು ವಜ್ರಾಭರಣಗಳನ್ನು ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಮೇಲುಕೋಟೆಗೆ ಕೊಂಡೊಯ್ಯುವುದು ಸಂಪ್ರದಾಯ. ಅದರಂತೆ ಈ ವರ್ಷವೂ ಅದೇ ವಾಹನದಲ್ಲಿ ಪ್ರಯಾಣ ಬೆಳೆಸಲಾಯಿತು.
ಖಜಾನೆಯಿಂದ ಹೊರಟ ವಾಹನವು ನಂತರ ನಗರದ ಶ್ರೀ ಲಕ್ಷ್ಮಿಜನಾರ್ದನಸ್ವಾಮಿ ದೇವಾಲಯಕ್ಕೆ ತೆರಳಿತು. ಮಂಗಳವಾದ್ಯಗಳ ಸದ್ದಿನೊಂದಿಗೆ ದೇವಾಲಯ ಅವರಣದಲ್ಲಿ 7.50ಕ್ಕೆ ವೈರಮುಡಿ ಆಭರಣಕ್ಕೆ ಸ್ವಾಗತ ಕೋರಲಾಯಿತು. ಅಲ್ಲಿನ ಮಂಟಪದಲ್ಲಿ ವೈರಮುಡಿಯನ್ನು ಇಟ್ಟು ಶ್ರೀ ಚಲುವನಾರಾಯಣಸ್ವಾಮಿ ದೇವರ ಒಕ್ಕಲಿನವವರು ಸಾಂಪ್ರದಾಯಿಕ ಪೂಜೆ ನೆರವೇರಿಸಿದರು. ಅಲ್ಲಿಂದ 8.10ಕ್ಕೆ ವಾಹನವು ಮೇಲುಕೋಟೆಯತ್ತ ಸಾಗಿತು. ಇದೇ ವೇಳೆ ಶ್ರೀ ಲಕ್ಷ್ಮೀಜನಾರ್ದನ ದೇವಾಲಯದ ಪಕ್ಕದಲ್ಲಿನ ಶ್ರೀ ಶ್ರೀನಿವಾಸಸ್ವಾಮಿ ದೇವಾಲಯ ಬಳಿಯೂ ಮಹಿಳೆಯರು ಪೂಜೆ ಸಲ್ಲಿಸಿದರು.
ದಾರಿಯುದ್ದಕ್ಕೂ ಸ್ವಾಗತ:
ಮೇಲುಕೋಟೆಗೆ ತೆರಳುವ ಮಾರ್ಗ ಮಧ್ಯೆ ಸಿಗುವ ಇಂಡುವಾಳು, ಸುಂಡಹಳ್ಳಿ, ತೂಬಿನಕೆರೆ, ಕಾಳೇನಹಳ್ಳಿ, ಗಣಂಗೂರು, ಬಾಬುರಾಯನಕೊಪ್ಪಲು, ಕಿರಂಗೂರು, ದರಸಗುಪ್ಪೆ, ಪಾಂಡವಪುರ, ಕೆ.ಬೆಟ್ಟಹಳ್ಳಿ, ಮಾಣಿಕ್ಯನಹಳ್ಳಿ, ಜಕ್ಕನಹಳ್ಳಿ ಸೇರಿದಂತೆ 86 ಹಳ್ಳಿಗಳ ಮಾರ್ಗವಾಗಿ ವೈರಮುಡಿ ಹೊತ್ತ ವಾಹನ ಮೇಲುಕೋಟೆಗೆ ಸಂಜೆ ವೇಳೆಗೆ ತಲುಪಿತು. ಮಾರ್ಗದುದ್ದಕ್ಕೂ ಹಳ್ಳಿಗಳ ರಸ್ತೆಗಳಲ್ಲಿ ರಂಗೋಲಿ ಇಟ್ಟು, ತಳಿರು, ತೋರಣ, ಚಪ್ಪರ ಹಾಕಿಕೊಂಡು ಕಾಯುತ್ತಿದ್ದ ಭಕ್ತರು ವೈರಮುಡಿಗೆ ಭಕ್ತಿಪೂರ್ವಕ ಸ್ವಾಗತ ಕೋರಿದರು. ಅಲ್ಲಲ್ಲಿ ಪಾನಕ, ನೀರು ಮಜ್ಜಿಗೆ ಮತ್ತು ಪ್ರಸಾದ ವಿನಿಯೋಗವೂ ನಡೆಯಿತು.