ಹೊಸದಿಗಂತ ಡಿಜಿಟಲ್ ಡೆಸ್ಕ್ :
ಚೀನಾದಲ್ಲಿ ಇತ್ತೀಚಿನ ದಿನಗಳಲ್ಲಿ ಜನನ ಪ್ರಮಾಣವು ಕಡಿಮೆಯಾಗುತ್ತಿದ್ದು,ಈ ಹಿನ್ನೆಲೆ ಸರಕಾರಹೊಸ ನೀತಿಗಳನ್ನು ಜಾರಿಗೆ ತರುತ್ತಿದೆ.
ಒನ್ ಚೈಲ್ಡ್ ಪಾಲಿಸಿಯಿಂದ ಚೀನಾದ ಜನಸಂಖ್ಯೆಯಲ್ಲಿ ಐತಿಹಾಸಿಕ ಕುಸಿತ ಕಂಡು ಬಂದಿರುವ ಕಾರಣ ಈ ಮಹತ್ತರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಕಡಿಮೆಯಾಗುತ್ತಿರುವ ಜನಸಂಖ್ಯೆಯು (Population) ಚೀನಾಗೆ ಕಳವಳ ಮೂಡಿಸಿದೆ. ಅದರಲ್ಲೂ ಯುವಜನತೆಯ ಸಂಖ್ಯೆ ಕಡಿಮೆಯಾಗಿದ್ದು, ಚೀನಾದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ಮತ್ತೆ ಜನಸಂಖ್ಯೆಯನ್ನು ಹೆಚ್ಚಿಸಲು ಚೀನಾ ಹೊಸ ಪ್ಲಾನ್ ಮಾಡಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ (Student) ಲವ್ವಲ್ಲಿ ಬೀಳಲೆಂದೇ ವಾರಗಟ್ಟಲೆ ರಜೆ ಕೊಟ್ಟಿದೆ.
9 ಕಾಲೇಜುಗಳು ವಿದ್ಯಾರ್ಥಿಗಳಿಗೆ ಫಾಲ್ ಇನ್ ಲವ್ ಎಂಬ ಯೋಜನೆ ಜಾರಿ ಮಾಡಿದ್ದು, ಒಂದು ವಾರಗಳು ಪ್ರೀತಿಯಲ್ಲಿ (Love) ಬೀಳಲು ಅವಕಾಶ ನೀಡಿದೆ.ಪ್ರೀತಿಯ ಹುಡುಕಾಟವನ್ನು ಪೂರ್ಣಗೊಳಿಸುವ ಹೆಸರಿನಲ್ಲಿ ಒಂದು ವಾರದ ವಿಶೇಷ ರಜೆ ನೀಡಲಾಗಿದೆ. ಈ ನಿರ್ಧಾರವು ದೇಶದಲ್ಲಿ ಕಡಿಮೆಯಾಗುತ್ತಿರುವ ಜನಸಂಖ್ಯೆಯನ್ನು ಎದುರಿಸಲು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ.
ಫ್ಯಾನ್ ಮೇ ಎಜುಕೇಶನ್ ಗ್ರೂಪ್ ನಡೆಸುತ್ತಿರುವ ಒಂಬತ್ತು ಕಾಲೇಜುಗಳಲ್ಲಿ ಒಂದಾದ ಮಿಯಾನ್ಯಾಂಗ್ ಫ್ಲೈಯಿಂಗ್ ವೊಕೇಶನಲ್ ಕಾಲೇಜು, ಮಾರ್ಚ್ 21 ರಂದು ಒಂದು ವಾರಗಳ ವಿರಾಮವನ್ನು ಘೋಷಿಸಿತು. ಏಪ್ರಿಲ್ 1 ರಿಂದ ಏಪ್ರಿಲ್ 7 ರವರೆಗೆ ಇರುವ ಸಮಯವು ವಸಂತ ವಿರಾಮವನ್ನು ಆನಂದಿಸುವ ಮೂಲಕ ಪ್ರಕೃತಿಯನ್ನು ಪ್ರೀತಿಸಲು, ಜೀವನವನ್ನು ಪ್ರೀತಿಸಲು ಮತ್ತು ಪ್ರೀತಿಯನ್ನು ಆನಂದಿಸಲು ಕಲಿಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಈ ಬಗ್ಗೆಪ್ರಾಂಶುಪಾಲರು ಮಾತನಾಡಿದ್ದು, ಇಂಥಾ ರಜೆಯಿಂದ ವಿದ್ಯಾರ್ಥಿಗಳು ಹಲವು ಪ್ರದೇಶಗಳನ್ನು ನೋಡಲು, ಅಲ್ಲಿನ ಪರಿಸರವನ್ನು ಅನುಭವಿಸಲು ಸಹಾಯಕವಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ತರಗತಿಗಳಲ್ಲಿ ಕಲಿಸುವ ಬೋಧನಾ ವಿಷಯಕ್ಕೂ ಸಹಾಯವಾಗುತ್ತದೆ. ಜೊತೆಗೆ ಜನನದ ಪ್ರಮಾಣವನ್ನು ಹೆಚ್ಚಿಸಲು ಇದು ಸಹಾಯಕವಾಗಿದೆ ಎಂದು ಹೇಳಿದರು.
ವಾರದಲ್ಲಿ ವಿದ್ಯಾರ್ಥಿಗಳಿಗೆ ಹೋಮ್‌ವರ್ಕ್ ಸಹ ನೀಡಲಾಗಿದೆ. ಡೈರಿಗಳನ್ನು ಬರೆಯುವುದು, ವೈಯಕ್ತಿಕ ಅಭಿವೃದ್ಧಿಯ ಬಗ್ಗೆ ನಿಗಾ ಇಡುವುದು ಮತ್ತು ಪ್ರಯಾಣದ ವಿಡಿಯೋಗಳನ್ನು ಮಾಡುವುದು ಒಳಗೊಂಡಿರುತ್ತದೆ. ಈ ಒಂದು ಪ್ರಯತ್ನವು ಜನನ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಉದ್ದೇಶವನ್ನು ಪೂರೈಸುವ ಪ್ರಯತ್ನವಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಚೀನಾ ಅತಿ ಕಡಿಮೆ ಜನನ ಪ್ರಮಾಣ ದರವನ್ನು ಹೊಂದಿದೆ. ಕಳೆದ ಆರು ದಶಕಗಳಲ್ಲೇ ಇದೆ ಮೊದಲು ಜನಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದ್ದು, 2022ರ ವರದಿಯ ಪ್ರಕಾರ ಪ್ರತಿ ಸಾವಿರ ಜನರಿಗೆ 6.77 ರಷ್ಟು ಜನನಗಳು ಮಾತ್ರ ಸಂಭವಿಸುತ್ತಿವೆ. ಅದರ ಹಿಂದಿನ ವರ್ಷ ಇದರ ಪ್ರಮಾಣ 7.52 ರಷ್ಟಿತ್ತು. ಇದೀಗ ಕುಸಿತ ಕಂಡಿರುವುದು ಚೀನಾದ ಕಳವಳಕ್ಕೆ ಕಾರಣವಾಗಿದೆ.