ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಿಂದ (Kuno National Park) ಸುಮಾರು 20 ಕಿಮೀ ದೂರದಲ್ಲಿರುವ ಝಾರ್ ಬರೋಡಾ ಗ್ರಾಮದ ಪಕ್ಕದ ಕೃಷಿ ಜಮೀನಿಗೆ ಚೀತಾ (Cheetah) ಒಂದು ಭಾನುವಾರ ಲಗ್ಗೆ ಇಟ್ಟಿದೆ.
ಚೀತಾ ಗ್ರಾಮಕ್ಕೆ ನುಗ್ಗಿರುವುದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ವಿಚಾರ ತಿಳಿಯುತ್ತಿದಂತೆ ಸ್ಥಳಕ್ಕಾಗಮಿಸಿರುವ ನಿಗಾವಣಾ ತಂಡವು ಒಬಾನ್ ಎಂಬ ಹೆಸರಿನ ಚೀತಾವನ್ನು ಮರಳಿ ಅರಣ್ಯಕ್ಕೆ ತರುವ ಪ್ರಯತ್ನ ಮಾಡಿದರು.
ಕಳೆದ ಸೆಪ್ಟೆಂಬರ್ನಲ್ಲಿ ನಮೀಬಿಯಾದಿಂದ 8 ಚೀತಾಗಳನ್ನು ತರಲಾಗಿತ್ತು. ಆ ಪೈಕಿ ಒಬಾನ್ ಕೂಡ ಒಂದು. ಮಾರ್ಚ್ 11ರಂದು ಕುನೋ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿತ್ತು ಎಂದು ಶಿಯೋಪುರ್ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ಪಿ.ಕೆ.ವರ್ಮಾ ಹೇಳಿದ್ದಾರೆ.
ಚೀತಾದ ಕೊರಳಿಗೆ ಹಾಕಿರುವ ಸಾಧನದಿಂದ ಬಂದ ಸಂಕೇತಗಳ ಪ್ರಕಾರ, ಚೀತಾ ಶನಿವಾರ ರಾತ್ರಿಯಿಂದ ಗ್ರಾಮದ ಕಡೆಗೆ ನುಗ್ಗಿದ್ದು, ಸ್ಥಳದಲ್ಲಿಯೇ ಭೇಟಿ ಕಾದುಕುಳಿತಿದೆ. ಪೊಲೀಸ್ ತಂಡವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಚೀತಾವಿರುವ ಪ್ರದೇಶದಿಂದ ಗ್ರಾಮಸ್ಥರಿಗೆ ನಿರ್ಬಂಧ ವಿಧಿಸಿದೆ.
ಸದ್ಯ ಒಬಾನ್ನನ್ನು ಮತ್ತೆ ಕಾಡಿಗೆ ಕರೆತರಲು ಸಿಬ್ಬಂದಿ ಕಾರ್ಯಚರಣೆ ನಡೆಸುತ್ತಿರುವಂತಹ ವಿಡಿಯೋ ಒಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 8 ಚೀತಾಗಳಲ್ಲಿ, 4 ಚೀತಾಗಳನ್ನು ಬೇಟೆಯಾಡುವ ಆವರಣಗಳಿಂದ ಮುಕ್ತ ವ್ಯಾಪ್ತಿಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿತ್ತು. ಚೀತಾ ಸಂತತಿ ಉಳಿವಿಗಾಗಿ ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು ಕೆಎನ್ಪಿಗೆ ತರಲಾಗಿದೆ.