ಮತ್ತೆ ತನ್ನ ನರಿ ಬುದ್ದಿ ತೋರಿದ ಚೀನಾ: ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕುತಂತ್ರಿ ಚೀನಾ ಭಾರತದೊಂದಿಗೆ ಸ್ನೇಹದ ನೆಪದಲ್ಲಿ ಏನು ಮಾಡಬೇಕೋ ಅದೆಲ್ಲವನ್ನು ಮಾಡುತ್ತಿದೆ. ಒಂದೆಡೆ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸುವ ಮೂಲಕ ಭಾರತವನ್ನು ನಿರ್ಬಂಧಿಸಲು ಯತ್ನಿಸುತ್ತಿದೆ. ಭಾರತದ ಭೂಪ್ರದೇಶವಾಗಿರುವ ಅರುಣಾಚಲ ಪ್ರದೇಶ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಇದೀಗ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ ಮಾಡಿದೆ. ಚೈನೀಸ್, ಟಿಬೆಟಿಯನ್ ಮತ್ತು ಪಿನ್ಯಿನ್ ಭಾಷೆಗಳಲ್ಲಿ ಹೆಸರುಗಳನ್ನು ಬಿಡುಗಡೆ ಮಾಡಲಾಗಿದೆ.

ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಭಾನುವಾರ ಈ ಹೆಸರುಗಳನ್ನು ಬಿಡುಗಡೆ ಮಾಡಿದ್ದು, ಚೀನಾ ಸಚಿವ ಸಂಪುಟದ ನಿರ್ಧಾರದಂತೆ ‘ಜಾನ್ ನನ್’ ಹೆಸರಿನಲ್ಲಿ ಚೀನಾ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸದಾಗಿ ಬಿಡುಗಡೆಯಾದ ಹೆಸರುಗಳಲ್ಲಿ 2 ಭೂಪ್ರದೇಶಗಳು, 5 ಪರ್ವತಗಳು, 2 ವಸತಿ ಪ್ರದೇಶಗಳು ಮತ್ತು 2 ನದಿಗಳು ಸೇರಿವೆ ಎಂದು ಚೀನಾದ ಮಾಧ್ಯಮ ಗ್ಲೋಬಲ್ ಟೈಮ್ಸ್ ಬಹಿರಂಗಪಡಿಸಿದೆ. ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸಲು ಚೀನಾ ಹೀಗೆ ಮಾಡುತ್ತಿದೆ. ಚೀನಾ ಅರುಣಾಚಲ ಪ್ರದೇಶವನ್ನು ‘ದಕ್ಷಿಣ ಟಿಬೆಟ್’ ಎಂದು ಕರೆಯುತ್ತದೆ.

ಈ ಹಿಂದೆಯೂ ಎರಡು ಬಾರಿ ಅರುಣಾಚಲ ಪ್ರಾಂತ್ಯಗಳನ್ನು ಚೀನಾ ಹೆಸರಿಸಿತ್ತು. 2017 ರಲ್ಲಿ ಮೊದಲ ಬಾರಿಗೆ 6 ಪ್ರದೇಶಗಳಿಗೆ ಮತ್ತು ಎರಡನೇ ಬಾರಿಗೆ 2021 ರಲ್ಲಿ 15 ಪ್ರದೇಶಗಳಿಗೆ ಹೆಸರುಗಳನ್ನು ಬಿಡುಗಡೆ ಮಾಡಲಾಗಿದೆ.

ಚೀನಾದ ಕ್ರಮಕ್ಕೆ ಭಾರತ ಸಿಟ್ಟಾಗಿದ್ದು, ಚೀನಾದ ಈ ಕುತಂತ್ರಿ ನಿರ್ಧಾರಗಳು ಇದೇ ಮೊದಲೇನಲ್ಲ, ಅರುಣಾಚಲ ಪ್ರದೇಶವು ಯಾವಾಗಲೂ ಭಾರತೀಯ ಭೂಪ್ರದೇಶವಾಗಿರುತ್ತದೆ ಮತ್ತು ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ. ಹೆಸರುಗಳನ್ನು ನೀಡುವ ಮೂಲಕ ವಾಸ್ತವವನ್ನು ಬದಲಾಯಿಸಲಾಗುವುದಿಲ್ಲ ಎಂದು ಭಾರತ ತಿರುಗೇಟು ನೀಡಿದೆ.

ಭಾರತದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಭೆಯಲ್ಲಿ ಚೀನಾದ ರಕ್ಷಣಾ ಸಚಿವರು ಪಾಲ್ಗೊಳ್ಳಲಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆಯುತ್ತಿರುವುದು ಗಮನಾರ್ಹ. ಭಾರತವು ಪ್ರಸ್ತುತ ಯುರೇಷಿಯಾ ಗುಂಪಿನ ಅಧ್ಯಕ್ಷ ಸ್ಥಾನವನ್ನು ಹೊಂದಿದೆ. ಇದಲ್ಲದೆ, ಜುಲೈನಲ್ಲಿ ನಡೆಯಲಿರುವ ಎಸ್‌ಸಿಒ ಶೃಂಗಸಭೆಗಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ಭಾರತಕ್ಕೆ ಬರುವ ಸಾಧ್ಯತೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!