ಹೊಸದಿಗಂತ ಡಿಜಿಟಲ್ ಡೆಸ್ಕ್ :
ಪ್ರಧಾನಿ ನರೆಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಲಿದ್ದು, ಏಪ್ರಿಲ್ 8 ಮತ್ತು 9 ರಂದು ಮೈಸೂರು ಪ್ರವಾಸ ಕೈಗೊಂಡಿದ್ದಾರೆ.
ಏಪ್ರಿಲ್ 8ರ ರಾತ್ರಿ 8:30 ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ ಇಲ್ಲಿನ ರ್ಯಾಡಿಷನ್ ಬ್ಲೂ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಏಪ್ರಿಲ್ 9 ರಂದು ಬೆಳಗ್ಗೆ 6:30ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಚಾಮರಾಜನಗರ ಜಿಲ್ಲೆಯ ಬಂಡೀಪುರಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ 9.30 ರವರೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಬಳಿಕ ಬಂಡೀಪುರದಿಂದ ತಮಿಳುನಾಡಿನ ನೀಲಗಿರಿಗೆ ತೆರಳಲಿದ್ದಾರೆ. ನೀಲಗಿರಿಯಲ್ಲಿ ಆನೆ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ನಂತರ ಮೈಸೂರಿನ ಕೆಎಸ್ಒಯುನ ತಾತ್ಕಾಲಿಕ ಹೆಲಿಪ್ಯಾಡ್ಗೆ ಬೆಳಗ್ಗೆ 11ಕ್ಕೆ ಆಗಮಿಸುವರು. ಬಳಿಕ ಕೆಎಸ್ಒಯುನ ಘಟಿಕೋತ್ಸವ ಭವನದಲ್ಲಿ ಮಧ್ಯಾಹ್ನ 12.30ಕ್ಕೆ ನಡೆಯುವ ಬಂಡೀಪುರ ಹುಲಿ ಯೋಜನೆ 50 ವರ್ಷಗಳ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಆನಂತರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ವಾಪಸ್ ಆಗಲಿದ್ದಾರೆ.
ಮೋದಿ ಆಗಮನದ ಹಿನ್ನೆಲೆ ಅರಣ್ಯ ಇಲಾಖೆ ಸಾಕಷ್ಟು ತಯಾರಿ ನಡೆಸುತ್ತಿದೆ. ರಸ್ತೆ ದುರಸ್ತಿಯೂ ನಡೆಯುತ್ತಿದೆ. ಜೊತೆಗೆ ಏಪ್ರಿಲ್ 4 ರಿಂದ 9 ರ ವರೆಗೆ ಬಂಡೀಪುರದಲ್ಲಿ ಅರಣ್ಯ ಇಲಾಖೆಗೆ ಸೇರಿದ ಅತಿಥಿಗೃಹ, ಕಾಟೇಜ್ಗಳ ಬುಕ್ಕಿಂಗ್ ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮೋದಿ ಭೇಟಿ ವೇಳೆ ಯಾವುದೇ ಅಹಿತಕರ ಹಾಗೂ ಭದ್ರತಾ ಲೋಪ ಉಂಟಾಗದ ರೀತಿ ಬಿಗಿ ಭದ್ರತೆ ಕೈಗೊಳ್ಳುವ ಉದ್ದೇಶದಿಂದ ಎಡಿಜಿಪಿ ಅಲೋಕ್ ಕುಮಾರ್ ಬಂಡೀಪುರಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ಮಾಡಿದ್ದಾರೆ.