ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕಣ್ಣೂರಿಗೆ ಚಲಿಸುತ್ತಿದ್ದ ರೈಲಿನಲ್ಲಿ ಮೂವರು ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿ ಕೊಂದ ಘಟನೆಯ ಮೂರು ದಿನಗಳ ಬಳಿಕ ಪ್ರಮುಖ ಆರೋಪಿಯನ್ನು ಮಹಾರಾಷ್ಟ್ರದ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳ ಬುಧವಾರ ಬಂಧಿಸಿದ್ದಾರೆ.
ಕೇಂದ್ರ ಗುಪ್ತಚರ ಮತ್ತು ಭಯೋತ್ಪಾದನಾ ನಿಗ್ರಹ ಅಧಿಕಾರಿಗಳ ಜಂಟಿ ತಂಡವು ಶಾರುಖ್ ಎಂಬಾತನನ್ನು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಬಂಧಿಸಿದೆ.
ಕೇರಳ ಪೊಲೀಸರ ತಂಡವು ರತ್ನಗಿರಿ ತಲುಪಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಅವರಿಗೆ ಹಸ್ತಾಂತರಿಸಲಾಗುವುದು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಾಳಿಯ ಹಿಂದಿನ ಉದ್ದೇಶವು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಕೋಳಿಕ್ಕೋಡ್ ಜಿಲ್ಲೆಯ ಎಲತ್ತೂರ್ ಬಳಿ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದ ನಂತರ ಪ್ರಯಾಣಿಕರಿಗೆ ಬೆಂಕಿ ಹಚ್ಚಿರುವುದಾಗಿ ಶಂಕಿತನು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಭಾನುವಾರ ರಾತ್ರಿ ಕಣ್ಣೂರಿಗೆ ತೆರಳುತ್ತಿದ್ದ ರೈಲಿನ ಡಿ1 ಕಂಪಾರ್ಟ್ಮೆಂಟ್ನೊಳಗೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿ ಪ್ರಯಾಣಿಕರ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದ. ಘಟನೆಯಲ್ಲಿ ಎರಡು ವರ್ಷದ ಬಾಲಕಿ ಸೇರಿದಂತೆ ಮೂರು ಪ್ರಯಾಣಿಕರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.