ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕೋಳಿ ಸಾರು ವಿಚಾರದಲ್ಲಿ ಆರಂಭವಾದ ತಂದೆ ಮಗನ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಕಳೆದ ರಾತ್ರಿ ಸುಳ್ಯದ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಬಳಿ ನಡೆದಿದೆ.
ಕೊಲೆಯಾದವರನ್ನು ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶಿವರಾಮ(32) ಎಂದು ಗುರುತಿಸಲಾಗಿದೆ. ಮೃತರ ತಂದೆ ಶೀನ ಕೊಲೆ ಆರೋಪಿಯಾಗಿದ್ದು, ಆತನನ್ನು ಸುಬ್ರಹ್ಮಣ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ರಾತ್ರಿ ಮನೆಯಲ್ಲಿ ಕೋಳಿಸಾರು ಮಾಡಲಾಗಿತ್ತೆನ್ನಲಾಗಿದೆ. ಶಿವರಾಮ ರಾತ್ರಿ ಮನೆಗೆ ತಡವಾಗಿ ಬಂದಿದ್ದು, ಈ ವೇಳೆ ಕೋಳಿ ಸಾರು ಖಾಲಿ ಆಗಿತ್ತೆನ್ನಲಾಗಿದೆ. ಇದನ್ನು ಶಿವರಾಮ ಆಕ್ಷೇಪಿಸಿ ಮಾತನಾಡತೊಡಗಿದಾಗ ತಂದೆ ಮತ್ತು ಮಗನಿಗೂ ಜಗಳ ಆರಂಭವಾಗಿದೆ. ಈ ವೇಳೆ ಕೋಪಗೊಂಡ ಶೀನ ಬಡಿಗೆಯಿಂದ ಮಗನ ತಲೆಗೆ ಬಲವಾಗಿ ಹೊಡೆದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಶಿವರಾಮ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಗಿ ವರದಿಯಾಗಿದೆ.
ವಿಷಯ ತಿಳಿದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಶೀನನನ್ನು ಬಂಧಿಸಿದ್ದಾರೆ. ಶಿವರಾಮರ ಮೃತ ದೇಹವನ್ನು ಕಡಬ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.