ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶ ಸರಕಾರ ಪ್ರವಾಸೋದ್ಯಮದಲ್ಲಿ ಹೊಸ ಸೇವೆಯನ್ನು ತಂದಿದ್ದು, ಈ ಮೂಲಕ ಭಕ್ತರು ಹೆಲಿಕಾಪ್ಟರ್‌ನಿಂದ ಅಯೋಧ್ಯೆ ರಾಮ ಮಂದಿರದ ನಗರ ಮತ್ತು ಸರಯೂ ನದಿಯನ್ನು ವೀಕ್ಷಿಸಬಹುದಾಗಿದೆ.
ರಾಮನವಮಿಯ ದಿನದಂದು ವೈಮಾನಿಕ ವೀಕ್ಷಣೆ ಸೇವೆಯನ್ನು ಪ್ರಾರಂಭಿಸಲಾಯಿತು.ಅಧಿಕೃತ ಹೇಳಿಕೆಯ ಪ್ರಕಾರ, ಈ ಹೆಲಿಕಾಪ್ಟರ್ ಸೇವೆಯನ್ನು ಅಯೋಧ್ಯೆಯ ಸರಯೂ ಅಥಿತಿ ಗೃಹದಿಂದ ಪ್ರಾರಂಭಿಸಲಾಗಿದೆ. ಇದರಲ್ಲಿ ಪ್ರವಾಸಿಗರಿಗೆ ಏಳರಿಂದ ಎಂಟು ನಿಮಿಷಗಳ ಹಾರಾಟದಲ್ಲಿ ಅಯೋಧ್ಯಾ ನಗರ ಮತ್ತು ಸರಯೂ ನದಿಯ ವೈಮಾನಿಕ ನೋಟವನ್ನು ತೋರಿಸಲಾಗುತ್ತದೆ.
ಒಬ್ಬ ವ್ಯಕ್ತಿಗೆ 3 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಪ್ರಸ್ತುತ ಈ ಸೇವೆಯು 15 ದಿನಗಳವರೆಗೆ ಇದೆ. ಇದನ್ನು ನಂತರ ವಿಸ್ತರಿಸಲಾಗುವುದು ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ಹೆಲಿಕಾಪ್ಟರ್ ಸವಾರಿಯ ಸಂಖ್ಯೆಯು ಹೆಚ್ಚಾಗುತ್ತದೆ.
ಈ ಕುರಿತು ಮಾಹಿತಿ ನೀಡಿದ ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ಅವರು, ಅಯೋಧ್ಯೆಯಲ್ಲಿ ಉತ್ತಮ ಸಂಪರ್ಕಕ್ಕಾಗಿ ಹಾಗೂ ಅಯೋಧ್ಯೆಯನ್ನು ಪ್ರವಾಸೋದ್ಯಮದೊಂದಿಗೆ ಸಂಪರ್ಕಿಸಲು ಉತ್ತರ ಪ್ರದೇಶ ಸರ್ಕಾರವು ವಿವಿಧ ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಹೇಳಿದರು.
ಪ್ರಸ್ತುತ ಇದು 15 ದಿನಗಳವರೆಗೆ ಪ್ರಯೋಗವಾಗಿದೆ. ನಂತರ ಅದನ್ನು ಮತ್ತಷ್ಟು ವಿಸ್ತರಿಸಲಾಗುವುದು. ಇದರೊಂದಿಗೆ ಉತ್ತರ ಪ್ರದೇಶದ ಇತರ ಯಾತ್ರಾ ಸ್ಥಳಗಳಲ್ಲಿಯೂ ಹೆಲಿಕಾಪ್ಟರ್ ಸೇವೆ ಶೀಘ್ರದಲ್ಲಿಯೇ ಲಭ್ಯವಾಗಲಿದೆ. ಸದ್ಯಕ್ಕೆ ಗೋವರ್ಧನ ಮತ್ತು ಅಯೋಧ್ಯೆಯಲ್ಲಿ ಈ ಸೌಲಭ್ಯ ಆರಂಭವಾಗಿದ್ದು, ಮುಂಬರುವ ಕುಂಭದ ಪ್ರಯಾಗರಾಜ್‌ನಲ್ಲೂ ಭಕ್ತರಿಗೆ ಹೆಲಿಕಾಪ್ಟರ್ ಸೌಲಭ್ಯವಿದ್ದು, ಪ್ರವಾಸಿಗರು ಆಕಾಶದಿಂದ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.