ಎಲ್ಲರಿಗೂ ಆಪ್ತ ಈ ರಾಮದೂತ ನಮ್ಮ ಹನುಮಂತ

– ನಿತೀಶ ಡಂಬಳ

ಇತ್ತೀಚೆಗೆ ನಡೆದ ಕೆಲವು ಘಟನೆಗಳು, ಪುಣೆಯ ಕಾರ್ಯಕ್ರಮವೊಂದರಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಹನುಮಂತ ಶ್ರೇಷ್ಠ ರಾಯಭಾರಿ ಎಂದು ಉಲ್ಲೇಖಿಸಿ ಅದಕ್ಕೆ ಸ್ಪಷ್ಟ ವಿವರಣೆ ನೀಡಿದ್ದರು. ಬೆಂಗಳೂರಿನ ಏರೋ ಇಂಡಿಯಾದಲ್ಲಿ ಎಚ್‌ಎಎಲ್‌ನ ಮಾರುತ ವಿಮಾನದ ಮೇಲೆ ಹಾಕಿದ್ದ ಮಾರುತಿಯ ಚಿತ್ರ ಬಹುಚರ್ಚೆಗೆ ಕಾರಣವಾಗಿತ್ತು. ಅರ್ಜುನನ ರಥದ ಧ್ವಜದ ಮೇಲಿಂದ ಹಿಡಿದು ಗರಡಿ ಮನೆಗಳ ಆರಾಧ್ಯ ದೈವದವರೆಗೆ, ಹಸುಗೂಸಿನ ಕೊರಳ ತಾಯತದಿಂದ ಹಿಡಿದು ಯುವಕರ ಕಾರ್-ಬೈಕ್ ಮೇಲೆ, ಪ್ರಚಂಡ ಸಾಹಸಿ ಬಿರುದಾಂಕಿತನಿಂದ ಶ್ರೇಷ್ಠ ದೂತನಾಗಿ ವಿಶ್ವದೆಲ್ಲೆಡೆ ವ್ಯಾಪಕವಾಗಿದ್ದಾನೆ ನಮ್ಮ ಹನುಮಂತ.

ಆಂಜನೇಯ ಒಬ್ಬ ದೇವರು ಎಂಬುದಕ್ಕೂ ಮಿಗಿಲಾಗಿ ಆತ ನಮ್ಮ ಆಪತ್ಬಾಂಧವ, ನಿತ್ಯದ ಜೀವನದಲ್ಲಿ ನಮ್ಮ ಬೆನ್ನ ಹಿಂದೆ ಸದಾ ಇರುವ ರಕ್ಷಕನಾಗಿದ್ದಾನೆ. ಏನಾದರಾಗಲಿ ಹನುಮಂತನಿದ್ದಾನೆ ಎಂಬ ಮಾತು ನಮಗೆ ಎಷ್ಟೋ ಬಾರಿ ನಿಶ್ಚಿಂತೆ ಮೂಡಿಸುತ್ತದೆ. ವಾಯುಪುತ್ರನೆಂದರೆ ಎಲ್ಲರಿಗೂ ಅಚ್ಚುಮೆಚ್ಚು ಅದರಲ್ಲೂ ನಮಗೆ ಆತ ಕನ್ನಡ ನಾಡಿನಲ್ಲೇ ಜನಿಸಿದನೆಂಬ ಅಭಿಮಾನ. ’ಹನುಮಂತನಿಲ್ಲದ ಊರಿಲ್ಲ’ ಎಂಬ ನಾಣ್ನುಡಿಯಂತೆ ಎಲ್ಲೆಡೆ ನೆಲೆಸಿ ತನ್ನ ಭಕ್ತರಿಗೆ ರಕ್ಷಣೆಯಿತ್ತು ಉದ್ಧರಿಸುತ್ತಿದ್ದಾನೆ.

ಕದರಮಂಡಲಗಿಯ ಕಾಂತೇಶ, ಶಿಕಾರಿಪುರದ ಭ್ರಾಂತೇಶ ಹಾಗೂ ಸಾತೇನಹಳ್ಳಿಯ ಶಾಂತೇಶ, ಒಂದೇ ದಿನದಲ್ಲಿ ಈ ಮೂರು ಹನುಮ ಸ್ವರೂಪಿಗಳ ದರ್ಶನ ಪಡೆದರೆ ಕಾಶಿ-ಬದರಿ ಯಾತ್ರೆಗೆ ಸಮವೆಂಬ ಪ್ರತೀತಿ ಬೆಳೆದು ಬಂದಿದೆ. ಇದಲ್ಲದೆ ಧಾರವಾಡದ ನುಗ್ಗಿಕೇರಿ ಹನುಮಂತ, ಮುದ್ದೇಬಿಹಾಳದ ಯಲಗೂರಿನ ಯಲಗೂರೇಶ್ವರ, ಸಿಂಧಗಿಯ ಕೊರವಾರದ ಕೊರವಾರೇಶ, ಮದ್ದೂರಿನ ಹೊಳೆ ಆಂಜನೇಯ, ಹಂಪಿಯ ಯಂತ್ರೋದ್ಧಾರಕ ಹನುಮಂತ, ಬಾಗಲಕೋಟೆ ತುಳಸಿಗೆರಿಯ ಆಂಜನೇಯ, ಅಚನೂರ ಹನುಮಪ್ಪ, ಮುಳುಬಾಗಿಲಿನ ಆಂಜನೇಯ, ಸಂಡೂರ ಬೊಮ್ಮಘಟ್ಟದ ಹುಲಿಕುಂಟರಾಯ, ಹೂವಿನ ಹಡಗಲಿ ಮದಲಘಟ್ಟದ ಆಂಜನೇಯ, ಗಂಗಾವತಿಯ ಭೋಗಾಪುರದ ಭೋಗಾಪುರೇಶ, ವಿಜಯಪುರ ಹಲಗಣಿಯ ಹಲಗಣೇಶ ಹೀಗೆ ನಾಡಿನಾದ್ಯಂತ ನೆಲೆಸಿರುವ ಅಂಜನಿಪುತ್ರ ಮಹಿಮೆ ಹಾಗೂ ಪ್ರಭಾವ ಬೀರಿದ್ದಾನೆ. ತನ್ನ ದರ್ಶನಕ್ಕೆ ಬರುವ ಭಕ್ತರ ಇಷ್ಟಾರ್ಥ ಪೂರೈಸುವಲ್ಲಿ ನಿರತನಾಗಿದ್ದಾನೆ.

ಪ್ರಭು ಶ್ರೀರಾಮ ಎಷ್ಟು ಆದರ್ಶಪ್ರಾಯವೋ ಅಷ್ಟೇ ಅವನ ಪರಮ ಭಕ್ತ ಕೂಡ. ರಾಮನಿಲ್ಲದೆ ಹನುಮ ಮಂದಿರವಿರಬಹುದು ಆದರೆ ಹನುಮನಿಲ್ಲದೆ ರಾಮ ಮಂದಿರ ಇರಲು ಅಸಾಧ್ಯ. ಅಂಥಃ ಶ್ರೇಷ್ಠ ಸ್ಥಾನ ಪಡೆದಿದ್ದಾನೆ ಆಂಜನೇಯ. ಆದರ್ಶ ಸಂಗತಿಗಳ ಸೆಲೆ, ಸದ್ಗುಣಗಳ ಗಣಿಯಾದ ಈ ರಾಮಭಂಟನಿಂದ ನಾವು ಕಲಿಯುವುದು ಬಹಳಷ್ಟಿದೆ. ಆತ ಕಪಿಯಾದರೂ ಅತೀ ಬುದ್ಧಿವಂತ, ಸಾಗರವನ್ನೇ ದಾಟಿ ಹಾರುವಷ್ಟು ಬಲವಂತ, ಅಸುರರ ಕಾವಲಿದ್ದರೂ ನಿರ್ಭಿತಿಯಿಂದ ಮಾತೆ ಸೀತೆಯ ಸಂದರ್ಶಿಸಿದವ, ಲಂಕೆಯ ಸುಟ್ಟು ಶತ್ರುಗಳ ಮನೋಬಲ ಕುಗ್ಗಿಸಿದ ಧೈರ್ಯವಂತ, ಅಜಾಢ್ಯ ರಹಿತ ಸದೃಢ ಕಾಯದ ಆರೋಗ್ಯವಂತ, ಸಂದರ್ಭ, ಸಜ್ಞೆ-ಸೂಕ್ಷ್ಮತೆಗಳನ್ನರಿತ ವಾಕ್ಚತುರ ಈ ಎಲ್ಲ ಗುಣಗಳು ನಮ್ಮಲ್ಲೂ ಪ್ರಾಪ್ತವಾಗಲೆಂದೇ ನಾವು ಪಠಿಸುವ ಅವನ ಮಂತ್ರ:
‌ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವ ಅರೋಗತಾ
ಅಜಾಢ್ಯಂ ವಾಕ್ ಪಟುತ್ವಂ ಚ ಹನುಮತ್ ಸ್ಮರಣಾತ್ ಭವೇತ್

ಕೆಲ ಸಂಶೋಧನೆ ಪ್ರಕಾರ ಭಾರತೀಯ ಯುದ್ಧ ಕಲೆಗಳಲ್ಲಿ ಬಳಸುವ ’ಪದ ವಿನ್ಯಾಸ’ (ಕಾಲಿನ ಚಲನೆ) ಉದ್ಭವವಾದದ್ದು ಹನುಮಂತನ ಪ್ರೇರಣೆಯಿಂದಲೇ. ಅಯ್ಯಪ್ಪ ಮಾಲೆ ಧರಿಸುವಂತೆ ಪ್ರತಿ ವರ್ಷ ಹನುಮ ಜಯಂತಿ ಪೂರ್ವದಲ್ಲಿ ಆಂಜನೇಯನ ಭಕ್ತರು ಹನುಮ ಮಾಲೆ ಧರಿಸಿ, ವ್ರತ ಆಚರಿಸಿ, ಅಂಜನಾದ್ರಿಗೆ ಬಂದು ವಿಸರ್ಜಿಸುವ ಪ್ರತಿತಿ ಬೆಳೆಸಿಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಹನುಮ ಜಯಂತಿ ಆಚರಣೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ.

ಹೇಗೆ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರ ಮತ್ತೆ ತಲೆಯೆತ್ತುದಿಯೋ ಅದೇ ವಾತಾವರಣ ಅವನ ಭಕ್ತನ ನೆಲದಲ್ಲೂ ಆಗಬೇಕೆಂಬ ಆಶಯ ಹೊಂದಿದ ಕರ್ನಾಟಕ ಸರ್ಕಾರ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಮೀಸಲಿಡುವ ಮೂಲಕ ಅಂಜನಾದ್ರಿಯನ್ನು ವಿಶ್ವಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡಲು ಹೊರಟಿದೆ.

ತ್ರೇತಾಯುಗದ ಹನುಮ ದ್ವಾಪರದಲ್ಲಿ ಅಪರಿಮಿತಿ ಬಲದ ಭೀಮನಾಗಿ, ಕಲಿಯುಗದಲ್ಲಿ ಅದ್ವಿತೀಯ ಜ್ಞಾನಿ ಮಧ್ವಾಚಾರ್ಯರಾಗಿ ಅವತರಿಸಿ ಭರತವರ್ಷದಲ್ಲಷ್ಟೇ ಅಲ್ಲದೆ ವಿಶ್ವವ್ಯಾಪಿಯಾಗಿ ರಾರಾಜಿಸುತ್ತಿದ್ದಾನೆ. ವಾಯುದೇವ ಹಾಗೂ ಅಂಜನಾದೇವಿಯ ಗರ್ಭಸಂಜಾತನ ಜನ್ಮದಿನದ ಈ ಪುಣ್ಯದಿನದಂದು ಅವನ ಶೌರ್ಯ, ಪರಾಕ್ರಮ, ಸದ್ಗುಣಗಳು ನಮ್ಮಲ್ಲೂ ಅಡಕವಾಗಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!