ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಪಿತ್ರಾರ್ಜಿತ ರಾಜಕೀಯ ಮತ್ತು ಕಾನೂನು ಸುವ್ಯವಸ್ಥೆಯ ಸವಾಲುಗಳನ್ನು ಭಗವಾನ್ ಹನುಮಂತನ ಸ್ಪೂರ್ತಿಯೊಂದಿಗೆ ಹೋರಾಡಲು ಬಿಜೆಪಿ ಸಂಕಲ್ಪ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗುರುವಾರ ಬಿಜೆಪಿಯ 44ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, ಹನುಮಂತನಂತೆ ಬಿಜೆಪಿ ದೇಶಕ್ಕಾಗಿ ದೃಢ ಸಂಕಲ್ಪ ಹೊಂದಿದ್ದು, ದೇಶದ ಹಿತಕ್ಕಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಹಿಂದೆ ಸರಿಯುವುದಿಲ್ಲ, ಪಕ್ಷದ ಕಾರ್ಯಕರ್ತರು ತ್ಯಾಗ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಕೃಷಿ ಮತ್ತು ರಕ್ಷಣೆಯಂತಹ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ಪ್ರಧಾನಿ ಪ್ರಸ್ತಾಪಿಸಿದರು. ಸಮಾಜದ ಎಲ್ಲ ವರ್ಗಗಳ ಸಬಲೀಕರಣಕ್ಕಾಗಿ ಬಿಜೆಪಿ ಶ್ರಮಿಸಲಿದೆ ಎಂದರು. ‘ಸಬ್ ಕಾ ಸಾಥ್, ಸಬ್ ಕಾ ಹಾಥ್, ಸಬ್ ಕಾ ವಿಕಾಸ್’ ಎಂಬ ಮಂತ್ರವನ್ನು ಬಿಜೆಪಿ ನಂಬುತ್ತದೆ ಎಂದು ಹೇಳಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ ಏಪ್ರಿಲ್ 14 ರವರೆಗೆ ಬಿಜೆಪಿ ಪಕ್ಷವು ಯೋಜಿಸಿದಂತೆ ಸಾಮಾಜಿಕ ಸಾಮರಸ್ಯ ಅಭಿಯಾನದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
‘ದೇಶ ಮೊದಲು’ ಎಂಬುದು ಬಿಜೆಪಿಯ ನೀತಿಯಾಗಿದೆ. ಮುಂದಿನ 25 ವರ್ಷಗಳ ದೂರದೃಷ್ಟಿ ಹೊಂದಬೇಕು ಮತ್ತು ನಮ್ಮ ಪಕ್ಷದ ಕಾರ್ಯಕರ್ತರಿಗೆ ಪಂಚಾಯತ್ ನಿಂದ ಸಂಸತ್ತಿನವರೆಗೆ ತರಬೇತಿ ನೀಡಬೇಕು ಎಂದು ಹೇಳಿದರು. ಹನುಮಂತನಲ್ಲಿ ಅಡಗಿರುವ ಶಕ್ತಿಯಂತೆ ಭಾರತ ಈಗ ತನ್ನ ಸಾಮರ್ಥ್ಯವನ್ನು ಅರಿತುಕೊಂಡಿದೆ. ದೇಶದ 10 ಲಕ್ಷ ಸ್ಥಳಗಳಲ್ಲಿ ಪ್ರಧಾನಿ ಭಾಷಣವನ್ನು ಇಂದು ಪ್ರದರ್ಶಿಸಲಾಯಿತು.