ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರು ರಾಜಕೀಯ ಪಕ್ಷಗಳಾದ ಮಮತಾ ಬ್ಯಾನರ್ಜಿ ಸಾರಥ್ಯದ ತೃಣಮೂಲ ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕೇಂದ್ರ ಚುನಾವಣಾ ಆಯೋಗ ತೆಗೆದುಹಾಕಿದೆ.
ಮಂಗಳವಾರ ಈ ಮೂರು ಪಕ್ಷಗಳ ರಾಷ್ಟ್ರೀಯ ಪಕ್ಷ ಸ್ಥಾನಮಾನವನ್ನು ವಾಪಾಸ್ ಪಡೆದುಕೊಂಡಿರುವುದಾಗಿ ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಇನ್ನೊಂದೆಡೆ ಎನ್ಸಿಪಿಯಿಂದ ವಾಪಾಸ್ ಪಡೆದು ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಆಮ್ ಆದ್ಮಿ ಪಾರ್ಟಿಗೆ ನೀಡಲಾಗಿದೆ.
ಪ್ರಾದೇಶಿಕ ಪಕ್ಷಗಳ ವಿಭಾಗದಲ್ಲಿ ಕೇಂದ್ರ ಚುನಾವಣಾ ಆಯೋಗ, ಕೆ.ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಹಾಗೂ ರಾಷ್ಟ್ರೀಯ ಲೋಕ ದಳಕ್ಕೆ ನೀಡಿದ್ದ ಪ್ರಾದೇಶಿಕ ಪಕ್ಷಗಳ ಸ್ಥಾನಮಾನವನ್ನು ತೆಗೆದುಹಾಕಿದೆ.
2019 ರಿಂದ, ಚುನಾವಣಾ ಆಯೋಗವು 16 ರಾಜಕೀಯ ಪಕ್ಷಗಳ ಸ್ಥಿತಿಯನ್ನು ಮೇಲ್ದರ್ಜೆಗೇರಿಸಿದೆ ಮತ್ತು 9 ರಾಷ್ಟ್ರೀಯ ರಾಜ್ಯ ರಾಜಕೀಯ ಪಕ್ಷಗಳ ಪ್ರಸ್ತುತ ಸ್ಥಿತಿಯನ್ನು ಹಿಂಪಡೆದಿದೆ.