ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗೆಲ್ಲಾ ಮಕ್ಕಳು ಯಾವ ಕಾರಣಕ್ಕೆ ಮನಸ್ಸಿಗೆ ನೋವು ಮಾಡಿಕೊಂಡು, ಯಾವ ನಿರ್ಧಾರಕ್ಕೆ ಬರುತ್ತಾರೆ ಎನ್ನುವುದನ್ನು ಊಹಿಸುವುದೂ ಅಸಾಧ್ಯ. ಇಲ್ಲೊಬ್ಬ ಬಾಲಕಿ ತನ್ನ ಕುಟುಂಬದವರ ಬುದ್ಧಿಮಾತಿಗೆ ಸಿಟ್ಟು ಮಾಡಿಕೊಂಡು ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮುಂಬೈನ ಪಶ್ಚಿಮ ಉಪನಗರದ ಮಾಲ್ವಾನಿ ಪ್ರದೇಶದಲ್ಲಿ 15 ವರ್ಷದ ಬಾಲಕಿ ತನ್ನ ಮನೆಯವರು ಮೊಬೈಲ್ ಕಿತ್ತುಕೊಂಡರು ಎಂಬ ಸಿಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಎಷ್ಟು ಸಮಯ ಅಂತ ಮೊಬೈಲ್ ನೋಡ್ತಾ ಇರ‍್ತೀಯಾ ಎಂದು ಪೋಷಕರು ಕೂಗಿ ಮೊಬೈಲ್ ಕಿತ್ತುಕೊಂಡಿದ್ದಾರೆ. ಅಸಮಾಧಾನಗೊಂಡ ಬಾಲಕಿ ಏಳನೇ ಅಂತಸ್ತಿನಿಂದ ಹಾರಿ ಪ್ರಾಣ ಬಿಟ್ಟಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.