ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಚುನಾವಣೆಗೆ ಎಲ್ಲೆಡೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಇದರ ಬೆನ್ನಲ್ಲೇ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ ಅವರು ನಾನು ಸ್ವಇಚ್ಚೆಯಿಂದಲೇ ರಾಜಕೀಯ ನಿವೃತ್ತಿ ಘೋಷಿಸಿದ್ದೇನೆ. ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ. ಟಿಕೆಟ್ ಕೈತಪ್ಪುವ ಭೀತಿಯಲ್ಲಿ ನಾನು ನಿವೃತ್ತಿ ಘೋಷಿಸಿಲ್ಲ. ಯಾವುದೇ ಕ್ಷೇತ್ರದಿಂದ ನನ್ನನ್ನು ಪರಿಗಣಿಸಬೇಡಿ ಎಂದು ನಾನು ನನ್ನ ನಿವೃತ್ತಿ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದಿದ್ದಾರೆ.
ಈ ಹಿಂದೆಯೇ ಈ ಬಾರಿ ಟಿಕೆಟ್ ಬೇಡ ಎಂದು ನಾಯಕರಿಗೆ ತಿಳಿಸಿದ್ದೆ. ಪಕ್ಷದ ಮಾತನ್ನು ಪರಿಗಣಿಸಲಿಲ್ಲ ,ಹೀಗಾಗ ನನಗೆ ಸಮಾಧಾನವಾಗಿರಲಿಲ್ಲ ಎಂದರು.
ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಇಂದು ಬೆಳಿಗ್ಗೆ ಪತ್ರದ ಮೂಲಕ ನಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ತಿಳಿಸಿದ್ದೇನೆ. ನನ್ನ ಪತ್ರವನ್ನು ಕೇಂದ್ರ ನಾಯಕರು ಪರಿಗಣಿಸುತ್ತಾರೆ ಎಂಬ ವಿಶ್ವಾಸವಿದೆ. ಬೂತ್ ಮಟ್ಟದಿಂದ ಡಿಸಿಎಂ ಹುದ್ದೆವರೆಗೂ ನಾನು ಹಲವು ಜವಾಬ್ದಾರಿ ನಿಭಾಯಿಸಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತನಾಗಿ ಮುಂದುವರೆಯುತ್ತೇನೆ. ಈ ಬಾರಿ ನಮ್ಮ ಟಾರ್ಗೆಟ್ ಸಂಪೂರ್ಣ ಬಹುಮತದಿಂದ ಬಿಜೆಪಿ ಸರ್ಕಾರ ರಚನೆ ಮಾಡಬೇಕು ಎಂಬುದು ಎಂದು ತಿಳಿಸಿದ್ದಾರೆ.
ಈಶ್ವರಪ್ಪ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಬೆಂಬಲಿಗರು ಅವರ ನಿವಾಸಕ್ಕೆ ದೌಡಾಯಿಸಿದ್ದಾರೆ. ಇನ್ನು ತಂದೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಪುತ್ರ ಕಾಂತೇಶ್ ಅವರು ತಂದೆ ಸರಿಯಾದ ನಿರ್ಧಾರವನ್ನೇ ಕೈಗೊಳ್ಳುತ್ತಾರೆ ಎಂದಿದ್ದಾರೆ. ಇನ್ನು ಈಶ್ವರಪ್ಪ ನಿವಾಸದಲ್ಲಿ ಬೆಂಬಲಿಗರು ಪುತ್ರನನ್ನು ಹೆಗಲ ಮೇಲೆ ಕೂರಿಸಿಕೊಂಡು ಜೈಕಾರ ಹಾಕಿದ್ದಾರೆ.