ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಕೆಎಸ್ ಈಶ್ವರಪ್ಪ ನಿವೃತ್ತಿ ಘೋಷಣೆ ಮಾಡಿದ್ದು, ಈ ಕುರಿತು ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಈಗಾಗಲೇ ಕೆಲ ಹಿರಿಯರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಕೆಎಸ್ ಈಶ್ವರಪ್ಪ ಕೂಡ ಇಂದು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಈಶ್ವರಪ್ಪ ಇನ್ನೂ ಸ್ವಲ್ಪ ಕಾಲ ರಾಜಕೀಯದಲ್ಲಿ ಇರಬೇಕಾಗಿತ್ತು ಎಂದರು.
ಜಗದೀಶ್ ಶೆಟ್ಟ ಜೊತೆ ನಾನು ಮಾತನಾಡಿದ್ದೇನೆ. ರಾಜಕಾರಣದಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಪ್ರಸ್ತಾಪವನ್ನು ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ. ನಿವೃತ್ತಿ ಘೋಷಣೆಯಾದ ಕಡೆ ಅಭ್ಯರ್ಥಿ ಬದಲಾವಣೆ ಆಗೇ ಆಗುತ್ತದೆ ಎಂದರು.
ಬಿಜೆಪಿ ವರಿಷ್ಠರ ಸಭೆಯಲ್ಲೇ ಅಭ್ಯರ್ಥಿಗಳ ತೀರ್ಮಾನ ಮಾಡಲಾಗಿದೆ. 2 ಹಂತದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ. ಇನ್ನೆರಡು ಗಂಟೆಯಲ್ಲೇ ಎಲ್ಲವೂ ಗೊತ್ತಾಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ವರಿಷ್ಠರು ಶೀಘ್ರದಲ್ಲೇ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.