ಹಿಂದೂ ಧರ್ಮದಲ್ಲಿ ವಿವಾಹವು ಷೋಡಶ ಸಂಸ್ಕಾರಗಳಲ್ಲಿ ಅತಿ ಮುಖ್ಯವಾದುದು. ಪ್ರತಿ ಯುವತಿಯ ಜೀವನದಲ್ಲಿ ಮದುವೆ ಒಂದು ಮಹತ್ವದ ಮತ್ತು ಮರೆಯಲಾಗದ ಕ್ಷಣ. ವಧುವಿನ ಉಡುಗೆಯಿಂದ ಹಿಡಿದು ಅಲಂಕಾರದವರೆಗೂ ಈ ಸಂದರ್ಭದಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತದೆ. ವಿವಿಧ ಶಾಸ್ತ್ರಗಳು, ಸಂಪ್ರದಾಯಗಳು ಪಾಲನೆಯಾಗುವಂತೆ, ವಧುವಿನ ಸೀರೆ ಆಯ್ಕೆಯಲ್ಲಿ ಒಂದು ಬಣ್ಣಕ್ಕೆ ಇಂದಿಗೂ ಪರಮೋಚ್ಚ ಸ್ಥಾನವಿದೆ ಅದೇ ಕೆಂಪು ಬಣ್ಣ.
ಫ್ಯಾಷನ್ ಮತ್ತು ಟ್ರೆಂಡ್‌ಗಳು ಬದಲಾಗುತ್ತಿದ್ದರೂ, ಸೀರೆಯ ವಿನ್ಯಾಸದಲ್ಲಿ ಮಾರ್ಪಾಡಾಗಿದ್ದರೂ, ಮದುವೆಯ ವಧುವಿಗೆ ಕೆಂಪು ಬಣ್ಣವೇ ಮೊದಲ ಆದ್ಯತೆಯಾಗಿ ಉಳಿದಿದೆ. ಬಹುತೇಕ ಮದುವೆಗಳಲ್ಲಿ ನೀವು ವಧು ಕೆಂಪು ರೇಷ್ಮೆ ಸೀರೆ ಉಟ್ಟಿರುವುದನ್ನು ನೋಡಿರುತ್ತೀರಿ. ಆದರೆ, ಈ ಶುಭ ಸಮಾರಂಭದಲ್ಲಿ ಕೆಂಪು ಬಣ್ಣವನ್ನೇ ಏಕೆ ಆಯ್ಕೆ ಮಾಡಲಾಗುತ್ತದೆ? ಇದರ ಹಿಂದಿನ ಕಾರಣಗಳನ್ನು ಇಲ್ಲಿ ತಿಳಿಯಿರಿ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವ
ಹಿಂದೂ ಧರ್ಮದಲ್ಲಿ, ಕೆಂಪು ಬಣ್ಣವನ್ನು ಸಕಾರಾತ್ಮಕತೆ, ಶಕ್ತಿ, ಪ್ರೀತಿ ಮತ್ತು ಶೌರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ವಧುವಿಗೆ ಕೆಂಪು ಬಣ್ಣದ ಸೀರೆಯನ್ನು ಉಡಿಸಲಾಗುತ್ತದೆ.
ಇದಲ್ಲದೆ, ಕೆಂಪು ಬಣ್ಣವು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ಲಕ್ಷ್ಮಿ ದೇವಿಯು ಸಹ ಯಾವಾಗಲೂ ಕೆಂಪು ವಸ್ತ್ರಗಳಲ್ಲೇ ಕಂಗೊಳಿಸುತ್ತಾಳೆ. ಮದುವೆಯ ನಂತರ ವಧುವನ್ನು ಮನೆಯ ಲಕ್ಷ್ಮಿಯ ಸಾಕಾರ ರೂಪ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ವಧು ಕೆಂಪು ಸೀರೆ ಧರಿಸುವುದರಿಂದ ಆಕೆಗೆ ಅದೃಷ್ಟ ಮತ್ತು ಸಮೃದ್ಧಿ ಒದಗಿ ಬರುತ್ತದೆ ಎಂಬ ನಂಬಿಕೆಯಿದೆ.
ಕೆಂಪು ಬಣ್ಣ ಕೇವಲ ಧಾರ್ಮಿಕವಾಗಿ ಶುಭವೆಂದು ಪರಿಗಣಿಸುವುದಲ್ಲದೆ, ಅದರ ಹಿಂದೆ ಮನೋವಿಜ್ಞಾನದ ಮಹತ್ವವೂ ಅಡಗಿದೆ.
ಕೆಂಪು ಬಣ್ಣವು ಪ್ರೀತಿ, ಶಕ್ತಿ ಮತ್ತು ಶುಭದ ಸಂಕೇತವಾಗಿದೆ.
ಮದುವೆಯಂತಹ ಶುಭ ಸಂದರ್ಭಗಳಲ್ಲಿ ಕೆಂಪು ಬಟ್ಟೆಗಳನ್ನು ಧರಿಸುವುದು ಹೊಸ ಜೀವನಕ್ಕೆ ಒಳ್ಳೆಯ ಆರಂಭದ ಸಂಕೇತವೆಂದು ಹೇಳಲಾಗುತ್ತದೆ.
ಇದು ಹೊಸ ಆರಂಭ, ಉತ್ಸಾಹ ಮತ್ತು ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ.
ಈ ಬಣ್ಣವು ಸಂತೋಷ ಮತ್ತು ಶಕ್ತಿಯನ್ನು ಹೆಚ್ಚಿಸಿ, ಸಂಪತ್ತನ್ನು ವೃದ್ಧಿಸುತ್ತದೆ ಎಂಬ ನಂಬಿಕೆಯಿದೆ.
ಈ ಎಲ್ಲಾ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಮನೋವೈಜ್ಞಾನಿಕ ಕಾರಣಗಳಿಂದಾಗಿಯೇ ಭಾರತೀಯ ವಿವಾಹ ಪದ್ಧತಿಯಲ್ಲಿ ವಧುವಿಗೆ ಕೆಂಪು ಬಣ್ಣದ ಸೀರೆ ಅತ್ಯಂತ ಶುಭಪ್ರದ ಮತ್ತು ಅನಿವಾರ್ಯ ಆಯ್ಕೆಯಾಗಿದೆ.

