ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಕೆಟ್ ಹಂಚಿಕೆ ವಿಷಯದಲ್ಲಿ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ. ಅದರಲ್ಲಿಯೂ ಬೆಳಗಾವಿಯಲ್ಲಿ ಹೆಚ್ಚೇ ಸಮಸ್ಯೆ ಕಾಣಿಸುತ್ತಿದ್ದು, ಬಂಡಾಯದ ಬಿಸಿ ಆರಿಸೋದಕ್ಕೆ ಇಂದು ಬೆಳಗಾವಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆಗಮಿಸಲಿದ್ದಾರೆ.
ಟಿಕೆಟ್ ವಂಚಿತರು, ಹಾಗೂ ಟಿಕೆಟ್ ಪಡೆದವರು ಎಲ್ಲರ ಜತೆ ಸಚಿವ ಪ್ರಧಾನ್ ಚರ್ಚೆ ನಡೆಸಲಿದ್ದಾರೆ. ನಿನ್ನೆಯೇ ಈ ಭೇಟಿ ನಿಗದಿಯಾಗಿತ್ತು, ಆದರೆ ಕಾರಣಾಂತರಗಳಿಂದ ಇಂದು ಸಭೆ ನಡೆಸಲಾಗುವುದು.
ಟಿಕೆಟ್ ಹಂಚಿಕೆ ಬಳಿಕ ಬೆಳಗಾವಿಯ ಎಂಟು ಕ್ಷೇತ್ರದಲ್ಲಿ ಬಂಡಾಯ ಭುಗಿಲೆದ್ದಿದೆ. ರಾಮದುರ್ಗ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಯಮನಕರಡಿ, ಖಾನಾಪುರ, ಸವದತ್ತಿ ಹಾಗೂ ಅಥಣಿ ಕ್ಷೇತ್ರದಲ್ಲಿ ಟಿಕೆಟ್ ವಂಚಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಟಿಕೆಟ್ ವಂಚಿತರು ಪಕ್ಷ ಬಿಟ್ಟು ಹೋಗದಂತೆ ನೋಡಿಕೊಳ್ಳುವ ಸಮಸ್ಯೆಯೂ ಎದುರಾಗಿದೆ, ಜನಮನ್ನಣೆ ಇರುವ ಕೆಲ ಶಾಸಕರಿಗೆ ಟಿಕೆಟ್ ಕೈತಪ್ಪಿದ್ದು, ಇಂಥ ನಾಯಕರಿಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಗಾಳ ಹಾಕುತ್ತಿದೆ. ಈಗಾಗಲೇ ಲಕ್ಷ್ಮಣ ಸವದಿ ಹಾಗೂ ಮಾಜಿ ಸಚಿವ ಶಶಿಕಾಂತ ನಾಯಿಕ್ ಕಾಂಗ್ರೆಸ್ ಸೇರಿದ್ದಾರೆ. ಟಿಕೆಟ್ ಬದಲಾವಣೆ ಆಗದಿದ್ದರೆ ಕಾಂಗ್ರೆಸ್ ಸೇರುವ ಬಗ್ಗೆ ಅನಿಲ್ ಬೆನಕೆ ಚಿಂತಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮಹಾದೇವಪ್ಪ ಯಾದವಾಡ ನಿರ್ಧರಿಸಿದ್ದಾರೆ. ಸಚಿವ ಪ್ರಧಾನ್ ಭೇಟಿಯಿಂದ ಬಂಡಾಯ ಶಮನವಾಗುವುದೇ? ಕಾದುನೋಡಬೇಕಿದೆ..