ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳು ಹೊರಬೀಳುತ್ತಿದ್ದು, ರಾಜಕೀಯವಾಗಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು ಕೇರಳದ ರಾಜಕಾರಣದಲ್ಲಿ ಹೊಸ ಅಧ್ಯಾಯ ಬರೆದಿದೆ.
ಎನ್‌ಡಿಎಯು ಒಟ್ಟು 101 ವಾರ್ಡ್‌ಗಳ ಪೈಕಿ 50 ಸ್ಥಾನಗಳಲ್ಲಿ ಜಯಗಳಿಸಿದ್ದು, ಈ ಮೂಲಕ ಆಡಳಿತಾರೂಢ ಎಲ್‌ಡಿಎಫ್‌ನ 45 ವರ್ಷಗಳ ಏಕಸ್ವಾಮ್ಯದ ಆಡಳಿತಕ್ಕೆ ಅಂತ್ಯ ಹಾಡಿದೆ. ಹಾಲಿ ಆಡಳಿತದಲ್ಲಿರುವ ಎಲ್‌ಡಿಎಫ್ ಕೇವಲ 29 ವಾರ್ಡ್‌ಗಳಿಗೆ ತೃಪ್ತಿಪಡಬೇಕಾಗಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವು 19 ವಾರ್ಡ್‌ಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಇಬ್ಬರು ಪಕ್ಷೇತರರು ಜಯಗಳಿಸಿದ್ದಾರೆ.
ಕಾರ್ಪೊರೇಷನ್‌ನಲ್ಲಿ ಅಧಿಕಾರಕ್ಕೆ ಬರಲು ಬೇಕಿರುವ ಬಹುಮತದ ಸಂಖ್ಯೆ 51 ಆಗಿದ್ದು, 50 ಸ್ಥಾನ ಗೆದ್ದಿರುವ ಬಿಜೆಪಿ, ಪ್ರತ್ಯೇಕವಾಗಿ ಗೆದ್ದಿರುವ ಇಬ್ಬರು ಸದಸ್ಯರೊಂದಿಗೆ ಮೈತ್ರಿ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಮಾತುಕತೆ ಯಶಸ್ವಿಯಾದರೆ, ತಿರುವನಂತಪುರಂ ಪಾಲಿಕೆಯು ದಕ್ಷಿಣ ಭಾರತದಲ್ಲಿ ಬಿಜೆಪಿಯ ಪ್ರಮುಖ ನೆಲೆಯಾಗಿ ರೂಪುಗೊಳ್ಳಲಿದೆ.
ಕೇರಳದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಆರ್. ಶ್ರೀಲೇಖಾ ಅವರು ತಿರುವನಂತಪುರಂ ಕಾರ್ಪೊರೇಷನ್‌ನ ಶಾಸ್ತಮಂಗಲಂ ವಿಭಾಗದಿಂದ ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಏರಿದರೆ, ಆರ್. ಶ್ರೀಲೇಖಾ ಅವರು ಮೇಯರ್ ಆಗಿ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.
| ಪಕ್ಷ/ಮೈತ್ರಿಕೂಟ | ಗೆದ್ದ ಸ್ಥಾನಗಳು |
| ಬಿಜೆಪಿ/ಎನ್‌ಡಿಎ | 50 |
| ಎಲ್‌ಡಿಎಫ್ | 29 |
| ಯುಡಿಎಫ್ | 19 |
| ಇತರರು | 02 |
| ಒಟ್ಟು ವಾರ್ಡ್‌ಗಳು | 101 |
ಕಳೆದ 2020ರ ಚುನಾವಣೆಯಲ್ಲಿ ಎಲ್‌ಡಿಎಫ್ 51, ಯುಡಿಎಫ್ 10, ಎನ್‌ಡಿಎ 34 ಮತ್ತು ಇತರರು 5 ಕ್ಷೇತ್ರಗಳಲ್ಲಿ ಜಯಗಳಿಸಿದ್ದರು. ಈ ಬಾರಿ ಬಿಜೆಪಿ ಭರ್ಜರಿ 16 ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ.
ಕೇರಳದಲ್ಲಿ ಬಿಜೆಪಿ ಹೇಳಿಕೊಳ್ಳುವಷ್ಟು ದೊಡ್ಡ ನೆಲೆ ಹೊಂದಿಲ್ಲ. ಇಲ್ಲಿ ಮುಖ್ಯವಾಗಿ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ನೇರ ಸ್ಪರ್ಧೆ ಇದೆ. ಆದರೆ, ಈ ಬಾರಿ ರಾಜಧಾನಿ ತಿರುವನಂತಪುರಂದಲ್ಲಿ ಕಮಲ ಅರಳಿದ್ದು, ಮುಂಬರುವ ದಿನಗಳಲ್ಲಿ ಕೇರಳ ರಾಜಕಾರಣದ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ. ಸದ್ಯ ಕಾಂಗ್ರೆಸ್ ನಾಯಕರ ವಿರೋಧಕ್ಕೆ ಕಾರಣವಾಗಿರುವ ಶಶಿ ತರೂರ್ ಅವರು ತಿರುವನಂತಪುರಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಇದೇ ವೇಳೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತರೂಢ ಎಲ್‌ಡಿಎಫ್‌ಗೆ ಭಾರೀ ಹಿನ್ನಡೆಯಾಗಿದ್ದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ರಾಜ್ಯದಾದ್ಯಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ. ಆದರೆ, ನಗರ ಪ್ರದೇಶದಲ್ಲಿ ಬಿಜೆಪಿ ಪರ ಒಲವು ವ್ಯಕ್ತವಾಗುತ್ತಿರುವುದು 2026ರ ವಿಧಾನಸಭಾ ಚುನಾವಣೆಗೆ ಹೊಸ ಸವಾಲುಗಳನ್ನು ಸೃಷ್ಟಿಸಿದೆ.
ಅಂತಿಮ ಫಲಿತಾಂಶಗಳು ಇಂದು ಸಂಜೆ ವೇಳೆಗೆ ಪ್ರಕಟವಾಗುವ ನಿರೀಕ್ಷೆಯಿದೆ.

